ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.06.2025 - ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು.

 ಮೊದಲನೇ ವಾಚನ: ಆದಿಕಾಂಡ 18: 16-33



ಆ ಮನುಷ್ಯರು ಅಲ್ಲಿಂದ ಹೊರಟು ಸೊದೋಮ್ ಕಾಣಿಸುತ್ತಿದ್ದ ಒಂದು ಸ್ಥಳಕ್ಕೆ ಬಂದರು. ಅವರನ್ನು ಸಾಗಕಳುಹಿಸುತ್ತಾ ಅಬ್ರಹಾಮನೂ ಅವರ ಜೊತೆಯಲ್ಲೇ ಅಲ್ಲಿಗೆ ಬಂದನು. ಆಗ ಸರ್ವೇಶ್ವರ ತಮ್ಮೊಳಗೆ ಇಂತೆಂದುಕೊಂಡರು: “ನಾನು ಮಾಡಬೇಕು ಎಂದಿರುವ ಕಾರ್ಯವನ್ನು ಅಬ್ರಹಾಮನಿಂದ ಮರೆಮಾಡುವುದು ಸರಿಯಲ್ಲ. ಅವನಿಂದ ಮಹಾ ಬಲಿಷ್ಠವಾದ ರಾಷ್ಟ್ರವೊಂದು ಹುಟ್ಟಬೇಕಾಗಿದೆ. ಅವನ ಮುಖಾಂತರ ಜಗದ ಎಲ್ಲ ರಾಷ್ಟ್ರಗಳಿಗೆ ನನ್ನ ಆಶೀರ್ವಾದ ದೊರಕಬೇಕಾಗಿದೆ. ಅವನು ತನ್ನ ಪುತ್ರ ಪೌತ್ರರಿಗೆ, ‘ನೀವು ನ್ಯಾಯ ನೀತಿಯನ್ನು ಪಾಲಿಸುತ್ತಾ ಸರ್ವೇಶ್ವರಸ್ವಾಮಿಯ ಮಾರ್ಗದಲ್ಲೇ ನಡೆಯಬೇಕು; ಹಾಗೆ ಮಾಡಿದರೆ ವಾಗ್ದಾನ ಮಾಡಿದುದನ್ನೆಲ್ಲ ಈಡೇರಿಸುವರು,’ ಎಂದು ಬೋಧಿಸಲೆಂದೇ ನಾನು ಅವನನ್ನು ಆರಿಸಿಕೊಂಡಿದ್ದೇನೆ.” ಇದಲ್ಲದೆ ಸರ್ವೇಶ್ವರ, “ಸೊದೋಮ್ ಗೊಮೋರಗಳ ವಿರುದ್ಧ ಎಷ್ಟೋ ಘನತರವಾದ ದೂರುಗಳು ನನಗೆ ಬಂದಿವೆ; ಆ ಊರಿನವರ ಮೇಲೆ ಹೊರಿಸಲಾಗಿರುವ ಪಾಪಕೃತ್ಯವೂ ಘೋರವಾದುದು. ನನಗೆ ಮುಟ್ಟಿರುವ ದೂರಂತೆ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ,” ಎಂದುಕೊಂಡರು. ಆಗ ಆ ಇಬ್ಬರು ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಸರ್ವೇಶ್ವರಸ್ವಾಮಿಯ ಸಂಗಡವೇ ಉಳಿದುಕೊಂಡನು. ಅವನು ಅವರ ಹತ್ತಿರಕ್ಕೆ ಬಂದು, “ನೀವು ದುರ್ಜನರ ಸಂಗಡ ಸಜ್ಜನರನ್ನೂ ನಾಶ ಮಾಡುವಿರೋ? ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ಸಜ್ಜನರಿದ್ದಾರು. ಅದರಲ್ಲಿ ಐವತ್ತು ಮಂದಿ ಸಜ್ಜನರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ? ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೆ?” ಎಂದನು. ಅದಕ್ಕೆ ಸರ್ವೇಶ್ವರ, “ಸೊದೋಮಿನಲ್ಲಿ ಐವತ್ತು ಮಂದಿ ಸಜ್ಜನರು ನನಗೆ ಸಿಕ್ಕಿದರೆ ಅವರ ನಿಮಿತ್ತ ಊರನ್ನೆಲ್ಲಾ ಉಳಿಸುತ್ತೇನೆ,” ಎಂದರು. ಆಗ ಅಬ್ರಹಾಮನು “ನಾನಂತೂ ಮಣ್ಣುಬೂದಿ. ಆದರೂ ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ. ಒಂದು ವೇಳೆ ಐವತ್ತು ಮಂದಿ ಸಜ್ಜನರಿಗೆ ಐದು ಮಂದಿ ಕಡಿಮೆಯಾಗಿದ್ದಾರು. ಐದು ಮಂದಿ ಕಡಿಮೆಯಾದುದಕ್ಕೆ ಪಟ್ಟಣವನ್ನೆಲ್ಲ ನಾಶ ಮಾಡುವಿರೋ?” ಎಂದು ಕೇಳಲು ಸರ್ವೇಶ್ವರ, “ಅಲ್ಲಿ ನಲವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವುದಿಲ್ಲ” ಎಂದರು. ಅಬ್ರಹಾಮನು ಇನ್ನೂ ಮುಂದುವರೆದು, “ಒಂದು ವೇಳೆ ಅಲ್ಲಿ ನಲವತ್ತು ಮಂದಿ ಸಿಕ್ಕಾರು” ಎನ್ನಲು “ನಲವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ,” ಎಂದರು. ಅಬ್ರಹಾಮನು, “ಸ್ವಾವಿೂ, ಕೋಪಮಾಡಬೇಡಿ; ಇನ್ನೂ ಮಾತಾಡುತ್ತೇನೆ. ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಸರ್ವೇಶ್ವರ, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೂ ಅದನ್ನು ನಾಶಮಾಡುವುದಿಲ್ಲ” ಎಂದರು. ಅವನು, “ಸ್ವಾಮಿಯ ಸಂಗಡ ಮಾತನಾಡಲು ನಾನು ಇನ್ನೂ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತೇ ಮಂದಿ ಅಲ್ಲಿ ಸಿಕ್ಕಾರು,” ಎನ್ನಲು, ಸರ್ವೇಶ್ವರ, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು. ಅಬ್ರಹಾಮನು, “ಸ್ವಾವಿೂ, ಸಿಟ್ಟುಗೊಳ್ಳಬೇಡಿ; ಇನ್ನು ಒಂದೇ ಒಂದು ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತೇ ಮಂದಿ ಸಿಕ್ಕಾರು” ಎನ್ನಲು, ಸರ್ವೇಶ್ವರ, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು. ಅನಂತರ ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿ ಸರ್ವೇಶ್ವರಸ್ವಾಮಿ ಹೊರಟುಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.

ಕೀರ್ತನೆ: 103:1-2, 3-4, 8-9, 10-11
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು I

ನನ್ನ ಅಂತರಂಗವೇ, ಭಜಿಸು ಆತನನು I
ನೆನೆ ಆತನ ಪರಮಪಾವನ ನಾಮವನು II
ಭಜಿಸು ನನ್ನ ಮನವೇ, ಭಜಿಸು ಪ್ರಭುವನು I
ಮರೆಯದಿರು ಆತನ ಉಪಕಾರಗಳೊಂದನು II

ಮನ್ನಿಸುವನಾತ ನನ್ನ ದೋಷಗಳನು I
ವಾಸಿಮಾಡುವನು ನನ್ನ ರೋಗಗಳನು II
ಉಳಿಸುವನು ಪಾತಾಳದ ಕೂಪದಿಂದ ನನ್ನನು I
ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು I

ಪ್ರಭು ದಯಾಳು, ಕೃಪಾಪೂರ್ಣನು I
ಸಹನಶೀಲನು, ಪ್ರೀತಿಮಯನು II
ಆತನು ಸದಾ ತಪ್ಪು ಹುಡುಕುವವನಲ್ಲ I
ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ II

ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ I
ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ II
ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ I
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ II

ಶುಭಸಂದೇಶ: ಮತ್ತಾಯ 8: 18-22




ದೊಡ್ಡ ಜನಸಮೂಹ ತಮ್ಮ ಸುತ್ತಲೂ ನಿಂತಿರುವುದನ್ನು ಯೇಸುಸ್ವಾಮಿ ನೋಡಿದರು. ಸರೋವರದ ಆಚೆಯ ದಡಕ್ಕೆ ಹೋಗಲು ತಮ್ಮ ಶಿಷ್ಯರಿಗೆ ಅಪ್ಪಣೆ ಮಾಡಿದರು. ಆಗ ಒಬ್ಬ ಧರ್ಮಶಾಸ್ತ್ರಿ ಬಂದು, "ಗುರುವೇ, ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ," ಎಂದನು. ಅದಕ್ಕೆ ಯೇಸು, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಟ್ಟು ಮಲಗಲೂ ಸ್ಥಳ ಇಲ್ಲ," ಎಂದರು. "ನನ್ನನ್ನು "ಸ್ವಾವಿೂ, ಸ್ವಾವಿೂ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲಿ; ನೀನು ನನ್ನನ್ನು ಹಿಂಬಾಲಿಸು," ಎಂದರು.

29.06.2025 - "ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11


ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು. ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು. ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು). ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು. ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು. ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು. ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು. ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು. ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು. ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿ ಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದುಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು. ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.

ಕೀರ್ತನೆ: 34:2-3, 4-5, 6-7, 8-9

ಶ್ಲೋಕ: ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು

ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 17-18

ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮೀಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ, ಆಮೆನ್.

ಶುಭಸಂದೇಶ: ಮತ್ತಾಯ 16:13-19


ಯೇಸುಸ್ವಾಮಿ ‘ಫಿಲಿಪ್ಪನ ಸೆಜರೇಯ’ ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದರು. ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ,” ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: “ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿ ಅಲ್ಲ. ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು,

28.06.2025 - ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೆ?”

 ಮೊದಲನೇ ವಾಚನ: ಯೆಶಾಯ: 61:9-11

ಪ್ರಖ್ಯಾತವಾಗುವುದು ಇವರ ಸಂತಾನ ವಿಶ್ವದಲ್ಲೆಲ್ಲ ಹೆಸರುವಾಸಿಯಾಗುವುದು ಇವರ ಸಂತತಿ ಅನ್ಯರಾಷ್ಟ್ರಗಳಲ್ಲೆಲ್ಲ. ಲಭಿಸುವುದು ಸರ್ವೇಶ್ವರನ ಆಶೀರ್ವಾದ ಈ ಜನತೆಗೆ ಖಚಿತವಾಗುವುದಿದು ನೋಡುವವರೆಲ್ಲರಿಗೆ.” ನಾನು ಪಡೆಯುವೆ ಸರ್ವೇಶ್ವರನಲ್ಲಿ ಪರಮಾನಂದ ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ. ಮದುವಣಿಗನಿಗೆ ಬಾಸಿಂಗವನು ತೊಡಿಸುವಂತೆ ವಧುವಿಗೆ ಆಭರಣಗಳಿಂದ ಅಲಂಕರಿಸುವಂತೆ ಹೊದಿಸಿಹನಾತ ನನಗೆ ಮುಕ್ತಿಯೆಂಬ ವಸ್ತ್ರವನು ತೊಡಿಸಿಹನು ನನಗೆ ನೀತಿಯೆಂಬ ನಿಲುವಂಗಿಯನು. ಬುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.

1 ಸಮುವೇಲ 2:1, 4-8
ಶ್ಲೋಕ: ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ. 

ಶುಭಸಂದೇಶ: ಲೂಕ: 2:41-51


ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು. ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು. ಹಬ್ಬ ಮುಗಿಸಿಕೊಂಡು ಅವರು ಹಿಂದಿರುಗಿ ಬರುವಾಗ ಬಾಲಕಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು. ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದುಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು. ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು. ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆಹಾಕುತ್ತಾ ಇದ್ದರು. ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಎಲ್ಲರೂ ಆತನ ಜ್ಞಾನವನ್ನು ಕಂಡು ಬೆರಗಾದರು. ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು. ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೆ?” ಎಂದರು. ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ. ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದರು. ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. 

 

27.06.2025 - "ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು"

 ಮೊದಲನೇ ವಾಚನ: ಯೆಜೆಕಿಯೇಲ 34:11-16

ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. ಮಂದೆಯ ಕುರುಬನು ಸುತ್ತಮುತ್ತಲು ಚದುರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲ ಸ್ಥಳಗಳಿಂದ ಬಿಡಿಸಿ, ಜನಾಂಗಗಳ ವಶದಿಂದ ತಪ್ಪಿಸಿ, ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ ಇಸ್ರಯೇಲಿನ ಬೆಟ್ಟಗಳಲ್ಲೂ, ತೊರೆಗಳ ಬಳಿಯಲ್ಲೂ ನಾಡಿನ ಎಲ್ಲಹಕ್ಕೆಗಳಲ್ಲೂ ಮೇಯಿಸುವೆನು; ಅವುಗಳಿಗೆ ಒಳ್ಳೆಯ ಮೇವನ್ನು ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅಲ್ಲಿ ಒಳ್ಳೆಯ ತೆವರಿನಲ್ಲಿ ಮಲಗುವುವು;  ಇಸ್ರಯೇಲಿನ ಬೆಟ್ಟಗಳಲ್ಲಿ ಹಸಿಹುಲ್ಲನ್ನು ಮೇಯುವುವು. ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ. "ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ದ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.

ಕೀರ್ತನೆ: 23:1-3, 4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ಎನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?

ಎರಡನೇ ವಾಚನ: ರೋಮನರಿಗೆ 5:5-11

ಸಹೋದರರೇ, ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ  ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ. ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ  ನಾವಿನ್ನೂ  ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ. ಕ್ರಿಸ್ತಯೇಸುವಿನ  ರಕ್ತಧಾರೆಯಿಂದ ನಾವೀಗ ದೇವರೊಡನೆ ಸತ್ಸಂಬಂಧದಲ್ಲಿದ್ದೇವೆ. ಹೀಗಿರಲಾಗಿ, ಬರಲಿರುವ ದೈವಕೋಪಾಗ್ನಿಯಿಂದ ಯೇಸುಕ್ರಿಸ್ತರ ಮುಖಾಂತರವೇ ಪಾರಾಗುತ್ತೇವೆ ಎಂಬುದು ಮತ್ತಷ್ಟು ನಿಶ್ಚಯವಲ್ಲವೆ? ನಾವು ದೇವರಿಗೆ ಶತ್ರುಗಳಾಗಿದ್ದರೂ ಅವರು ತಮ್ಮ ಮಗನ ಮರಣದ ಮೂಲಕ ನಮ್ಮನ್ನು ತಮ್ಮೊಡನೆ ಸಂಧಾನಗೊಳಿಸಿ ಮಿತ್ರರನ್ನಾಗಿ ಮಾಡಿಕೊಂಡರು. ನಾವೀಗ ದೇವರ ಮಿತ್ರರಾಗಿರುವುದರಿಂದ, ಕ್ರಿಸ್ತಯೇಸುವಿನ ಜೀವದ ಮೂಲಕ ಉದ್ದಾರ ಹೊಂದುತ್ತೇವೆ ಎಂಬುದು ಮತ್ತಷ್ಟು ಖಚಿತವಲ್ಲವೆ? ಅಷ್ಟೆ ಅಲ್ಲದೆ, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರು ನಮ್ಮನ್ನು ಮಿತ್ರರನ್ನಾಗಿಸಿರುವುದರಿಂದ ಅವರ ಮೂಲಕವೇ ನಾವು ದೇವರಲ್ಲಿ ಹೆಮ್ಮೆಪಡುತ್ತೇವೆ.

ಶುಭಸಂದೇಶ: ಲೂಕ  15:3-7


ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳಿವೆಯೆನ್ನೋಣ.  ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. "ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ, ಅಲ್ಲವೇ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ  ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

26.06.2025 - ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ.

 ಮೊದಲನೇ ವಾಚನ: ಆದಿಕಾಂಡ 16:1-12, 15-16

ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಈಜಿಪ್ಟ್ ದೇಶದವಳಾದ ಹಾಗರಳೆಂಬ ಒಬ್ಬ ದಾಸಿ ಇದ್ದಳು. ಎಂದೇ ಸಾರಯಳು ಅಬ್ರಾಮನಿಗೆ, “ನೋಡಿ, ನನಗೇನೋ ಸರ್ವೇಶ್ವರಸ್ವಾಮಿ ಮಕ್ಕಳನ್ನು ದಯಪಾಲಿಸಲಿಲ್ಲ; ನೀವು ನನ್ನ ದಾಸಿಯನ್ನು ಸೇರಬೇಕು. ಬಹುಶಃ ಅವಳ ಮೂಲಕವಾದರೂ ನನಗೆ ಮಕ್ಕಳಾದೀತು,” ಎಂದು ಹೇಳಿದಳು. ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು.ಹೀಗೆ ಹತ್ತು ವರ್ಷ ಕಾನಾನ್ ನಾಡಿನಲ್ಲಿ ವಾಸಮಾಡಿದ ಮೇಲೆ ಅಬ್ರಾಮನ ಹೆಂಡತಿ ಸಾರಯಳು ಈಜಿಪ್ಟಿನ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಉಪಪತ್ನಿಯಾಗಿ ಒಪ್ಪಿಸಿದಳು. ಅಬ್ರಾಮನು ಹಾಗರಳನ್ನು ಕೂಡಿದನು. ಅವಳು ಗರ್ಭಿಣಿಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದ ಅವಳು, ತನ್ನ ಯಜಮಾನಿಯನ್ನೇ ತಾತ್ಸಾರ ಮಾಡತೊಡಗಿದಳು. 

ಆಗ ಸಾರಯಳು ಅಬ್ರಾಮನಿಗೆ, “ನನಗೆ ಅನ್ಯಾಯವಾಗುತ್ತಿದೆ; ಇದಕ್ಕೆ ನೀವೇ ಹೊಣೆ. ನನ್ನ ದಾಸಿಯನ್ನು ನಿಮಗೆ ಉಪಪತ್ನಿಯಾಗಿ ಕೊಟ್ಟೆನಷ್ಟೆ; ಇವಳೋ, ತಾನು ಗರ್ಭಿಣಿಯಾದೆನೆಂದು ತಿಳಿದದ್ದೆ, ನನ್ನನ್ನು ತಾತ್ಸಾರಮಾಡುತ್ತಿದ್ದಾಳೆ; ಈಗ ಸರ್ವೇಶ್ವರಸ್ವಾಮಿಯೇ ನಿಮಗೂ ನನಗೂ ನ್ಯಾಯ ತೀರಿಸಬೇಕು,” ಎಂದು ದೂರಿದಳು. 

ಅದಕ್ಕೆ ಅಬ್ರಾಮನು, “ನಿನ್ನ ದಾಸಿ ನಿನ್ನ ಕೈಯಲ್ಲೇ ಇದ್ದಾಳೆ. ನಿನಗಿಷ್ಟಬಂದAತೆ ಮಾಡು,” ಎಂದುಬಿಟ್ಟನು. ಬಳಿಕ ಸಾರಯಳು ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಹಾಗರಳು ಓಡಿಹೋದಳು. 

 ಮರಳುಗಾಡಿನಲ್ಲಿ ಶೂರಿಗೆ ಹೋಗುವ ಹಾದಿಪಕ್ಕದಲ್ಲಿದ್ದ ಒಂದು ಒರತೆಯ ಬಳಿ ಸ್ವಾಮಿಯ ದೂತನು ಅವಳನ್ನು ಕಂಡನು. “ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?” ಎಂದು ವಿಚಾರಿಸಿದನು. “ನನ್ನ ಯಜಮಾನಿ ಸಾರಯಳ ಬಳಿಯಿಂದ ಓಡಿಹೋಗುತ್ತಿದ್ದೇನೆ,” ಎಂದು ಉತ್ತರಕೊಟ್ಟಳು. ಅದಕ್ಕೆ ಆ ದೂತನು, “ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು, ಅವಳಿಗೆ ತಗ್ಗಿ ನಡೆದುಕೊ,” ಎಂದು ತಿಳಿಸಿದನು. ಅದೂ ಅಲ್ಲದೆ ಸ್ವಾಮಿಯ ದೂತನು, “ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು,” ಎಂದು ಹೇಳಿ ಇಂತೆಂದನು:

ಹುಟ್ಟುವನು ಮಗನೊಬ್ಬನು
ಗರ್ಭಿಣಿಯಾದ ನಿನಗೆ
ಇಷ್ಮಾಯೇಲೆಂಬ ಹೆಸರನು
ಇಡು ಅವನಿಗೆ ಕಾರಣ- ಸರ್ವೇಶ್ವರ
ಕಿವಿಗೊಟ್ಟಿಹನು ನಿನ್ನ ಮೊರೆಗೆ.
ಬಾಳುವನವನು ಕಾಡುಗತ್ತೆಯಂತೆ
ಎತ್ತುವನು ಕೈಯನು ಎಲ್ಲರ ಮೇಲೆ,
ಎತ್ತುವರೆಲ್ಲರು ಕೈ ಅವನ ಮೇಲೆ
ಬಾಳುವನು ಸೋದರರಿಗೆ ಎದುರು ಬದುರಾಗೆ.” 
ಹಾಗರಳು ಅಬ್ರಾಮನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. ಆಗ ಅಬ್ರಾಮನಿಗೆ ಎಂಬತ್ತಾರು ವರ್ಷವಾಗಿತ್ತು.

ಕೀರ್ತನೆ: 106: 1-2. 3-4. 5
ಶ್ಲೋಕ:ಪ್ರಭು ದಯಾಪೂರಿತ,ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ //

1.ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ /
  ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ //
  ವರ್ಣಿಸಬಲ್ಲವನಾರು ಆತನ ಮಹತ್ಕರ‍್ಯಗಳನು?/
  ಯೋಗ್ಯರೀತಿಯಲಿ ಹೊಗಳಬಲ್ಲವರಾರು ಆತನನು? //
 
2.ನ್ಯಾಯದಂತೆ ನಡೆಯುವವರು ಧನ್ಯರು / ಅವಿರತವಾಗಿ ನೀತಿವಂತರು ಧನ್ಯರು //
   ಮರೆಯಬೇಡೆನ್ನನು ಪ್ರಭು, ನಿನ್ನ ಪ್ರಜೆಗೆ ದಯೆತೋರುವಾಗ /
   ನೆರವು ನೀಡೆನಗೆ ಸ್ವಾಮಿ, ನೀನಾ ಜನರನು ಉದ್ಧರಿಸುವಾಗ //

3.ನೀನಾರಿಸಿಕೊಂಡಿರುವ ಪ್ರಗತಿಯನು ನಾ ಕಾಣಮಾಡು /
  ನಿನ್ನ ಜನಾಂಗದವರ ಸಂತಸವನು ನಾ ಸವಿಯಮಾಡು /
  ನಿನ್ನ ಸ್ವಕೀಯರ ಮಹಿಮೆಯಲ್ಲೆನಗೆ ಪಾಲನ್ನು ನೀಡು //

ಶುಭಸಂದೇಶ: ಮತ್ತಾಯ 7:21-28


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು "ಸ್ವಾಮಿ, ಸ್ವಾಮಿ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ತೀರ್ಪಿನ ದಿನದಂದು, "ಸ್ವಾಮಿ, ಸ್ವಾಮಿ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿಮ್ಮ ಹೆಸರಿನಲ್ಲಿ ಹಲವಾರು ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?" ಎಂದು ಅನೇಕರು ನನಗೆ ಹೇಳುವರು. ಆಗ ನಾನು ಅವರಿಗೆ ‘ಇಂದಿಗೂ ನಿಮ್ಮ ಗುರುತೇ ನನಗಿಲ್ಲ. ಅಧರ್ಮಿಗಳೇ, ನನ್ನಿಂದ ತೊಲಗಿರಿ,’ ಎಂದು ಬಹಿರಂಗವಾಗಿ ಹೇಳಿಬಿಡುವೆನು."
"ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ! ಯೇಸುಸ್ವಾಮಿ ಇದೆಲ್ಲವನ್ನು ಹೇಳಿ ಮುಗಿಸಿದರು. ಅವರ ಬೋಧನೆ ಜನರಲ್ಲಿ ಅಮೋಘ ಪ್ರಭಾವವನ್ನು ಬೀರಿತು. ಏಕೆಂದರೆ, ಅವರ ಧರ್ಮಶಾಸ್ತಿçಗಳಂತೆ ಬೋಧಿಸದೆ ಯೇಸು ಅಧಿಕಾರ ವಾಣಿಯಿಂದ ಪ್ರಬೋಧಿಸುತ್ತಿದ್ದರು.

25.06.2025 - “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.”

 ಮೊದಲನೇ ವಾಚನ: ಆದಿಕಾಂಡ 15:1-12, 17-18

ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯ ದರ್ಶನ ಆಯಿತು. ಅದರಲ್ಲಿ ಸರ್ವೇಶ್ವರಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ, ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ.” ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು - "ಸ್ವಾಮಿ ಸರ್ವೇಶ್ವರಾ, ನನಗೆ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆ ಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ. ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,” ಎಂದನು. ಮತ್ತೆ ಸ್ವಾಮಿಯ ವಾಣಿ - “ಇಲ್ಲ, ಅವನು ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತರಾಧಿಕಾರಿ ಆಗುತ್ತಾನೆ,” ಎಂದಿತು. ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು. ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು. ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು. ಅದಕ್ಕೆ ಅಬ್ರಾಮನು, “ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?” ಎಂದನು. ಸರ್ವೇಶ್ವರ ಪ್ರತ್ಯುತ್ತರವಾಗಿ, “ನೀನು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ,” ಎಂದರು. ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳು ಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. ಆ ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು. ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: “ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,”

ಕೀರ್ತನೆ: 105: 1-2. 3-4. 6-7. 8-9
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I
ಮಾಡಿರಿ ಆತನ ನಾಮಸ್ಮರಣೆಯನು I
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II ಶ್ಲೋಕ

ಹಾಡಿ ಪಾಡಿ ಹೊಗಳಿರಿ ಪ್ರಭುವನು I
ಧ್ಯಾನಿಸಿ ನೀವು ಆತನ ಪವಾಡಗಳನು II
ಹೆಮ್ಮೆಪಡಿ, ನೆನೆದಾತನ ಶ್ರೀನಾಮ I ಶ್ಲೋಕ

ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II
ಅರಸಿರಿ ಪ್ರಭುವನೂ ಆತನ ಶಕ್ತಿಯನೂ I
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II ಶ್ಲೋಕ

ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I
ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು II
ಪ್ರಭು ನಮ್ಮ ದೇವನೆಂಬುದು ಶ್ರುತ I
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II ಶ್ಲೋಕ

ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು I ಶ್ಲೋಕ

ಶುಭಸಂದೇಶ: ಮತ್ತಾಯ 7:15-20


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತುತಿನ್ನುವ ತೋಳಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತುಹಚ್ಚುವಿರಿ."

23.06.2025 - "ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು"

 ಮೊದಲನೇ ವಾಚನ: ಆದಿಕಾಂಡ 12:1-9


ಸರ್ವೇಶ್ವರಸ್ವಾಮಿ ಅಬ್ರಾಮನಿಗೆ ಹೀಗೆಂದರು - “ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ. “ನಿನ್ನನ್ನು ಹರಸುವವರನು ನಾ ಹರಸುವೆ. ನಿನ್ನನ್ನು ಶಪಿಸುವವರನು ನಾ ಶಪಿಸುವೆ. ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ.” ಸರ್ವೇಶ್ವರ ಹೀಗೆಂದು ಹೇಳಿದಮೇಲೆ ಅಬ್ರಾಮನು ಹೊರಟನು. ಲೋಟನು ಅವನ ಸಂಗಡವೆ ಹೋದನು. ಆ ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಅಬ್ರಾಮನಿಗೆ ಎಪ್ಪತ್ತೈದು ವರ್ಷಗಳಾಗಿದ್ದವು. ತನ್ನ ಹೆಂಡತಿ ಸಾರಯಳನ್ನು, ತನ್ನ ತಮ್ಮನ ಮಗನಾದ ಲೋಟನನ್ನು, ತಾನು ಮತ್ತು ಲೋಟನು ಹಾರಾನಿನಲ್ಲಿ ಗಳಿಸಿದ ಆಸ್ತಿ ಪಾಸ್ತಿಯನ್ನು ಹಾಗು ದಾಸದಾಸಿಯರನ್ನು ತೆಗೆದುಕೊಂಡು ಹೋಗಿ ಕಾನಾನ್ ನಾಡನ್ನು ಸೇರಿದನು. ಆ ನಾಡಿನಲ್ಲಿ ಸಂಚರಿಸುತ್ತಾ ಅಬ್ರಾಮನು ಶೆಕೆಮ್ ಪುಣ್ಯಕ್ಷೇತ್ರದಲ್ಲಿರುವ ‘ಮೋರೆ’ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ನಾಡಿನಲ್ಲಿ ವಾಸವಾಗಿದ್ದರು. ಅಲ್ಲಿ ಸರ್ವೇಶ್ವರಸ್ವಾಮಿ ಅಬ್ರಾಮನಿಗೆ ದರ್ಶನವಿತ್ತು - “ಈ ನಾಡನ್ನು ನಾನು ನಿನ್ನ ಸಂತಾನಕ್ಕೆ ಕೊಡುತ್ತೇನೆ” ಎಂದು ಹೇಳಿದರು. ತನಗೆ ದರ್ಶನಕೊಟ್ಟ ಸರ್ವೇಶ್ವರನಿಗೆ ಅಬ್ರಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಬಳಿಕ ಅವನು ಅಲ್ಲಿಂದ ದಕ್ಷಿಣಕ್ಕೆ ಹೊರಟು ಬೇತೇಲಿಗೆ ಪೂರ್ವಕ್ಕಿರುವ ಗುಡ್ಡಗಾಡಿಗೆ ಬಂದು ಗುಡಾರ ಹಾಕಿ ನೆಲಸಿದನು. ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರು ಇದ್ದವು. ಅಲ್ಲೂ ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಅವರ ನಾಮಸ್ಮರಣೆ ಮಾಡಿ ಆರಾಧಿಸಿದನು. ತರುವಾಯ ಅಲ್ಲಿಂದ ಮುಂದೆ ಮುಂದಕ್ಕೆ ಸಾಗುತ್ತಾ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.

ಕೀರ್ತನೆ: 33: 12-13, 18-19, 20, 22
ಶ್ಲೋಕ: ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ 

ಭುವನು ದೇವರಾಗಿ ಪಡೆದ ಜನಾಂಗ ಧನ್ಯ I
ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ II
ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ I
ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ II ಶ್ಲೋಕ

ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II
ತಪ್ಪಿಸುವನವನು ಪ್ರಾಣವನು ಮರಣದಿಂದ I
ಉಳಿಸುವನು ಜೀವವನು ಕ್ಷಾಮಡಾಮರದಿಂದ II ಶ್ಲೋಕ

ಕಾದಿದೆ ಎನ್ನ ಮನ ಪ್ರಭುವಿಗಾಗಿ I
ಆತನಿಹನು ಎನಗೆ ಗುರಾಣಿಯಾಗಿ II
ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ I
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ II ಶ್ಲೋಕ

ಶುಭಸಂದೇಶ:ಮತ್ತಾಯ 7:1-5


"ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ; ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ. ನೀವು ಇತರರ ಬಗ್ಗೆ ಕೊಡುವ ತೀರ್ಪಿಗೆ ಅನುಗುಣವಾಗಿಯೇ ದೇವರು ನಿಮಗೂ ತೀರ್ಪುಕೊಡುವರು. ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿ ಒಂದು ದಿಮ್ಮಿಯೇ ಇರುವಾಗ, "ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ," ಎಂದು ನಿನ್ನ ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು. ಅನಂತರ ನಿನ್ನ ಸೋದರನ ಕಣ್ಣಿನಿಂದ ಅಣುವನ್ನು ತೆಗೆಯಲು ನಿನ್ನ ಕಣ್ಣು ನಿಚ್ಚಳವಾಗಿ ಕಾಣಿಸುವುದು."

22.06.25 - ನಮ್ಮಲ್ಲಿರುವುದು ಐದು ರೊಟ್ಟಿ ಮತ್ತು ಎರಡು ಮೀನು ಮಾತ್ರ

ಆದಿಕಾಂಡದಿಂದ ಇಂದಿನ ಮೊದಲನೆಯ ವಾಚನ 14:18-20

ಸಾಲೇಮಿನ ಅರಸನೂ ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನು ಸಹ ಅಲ್ಲಿಗೆ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಅರ್ಪಿಸಿ ಅಬ್ರಾಮನಿಗೆ ಇಂತೆಂದು ಆಶೀರ್ವಾದ ಮಾಡಿದನು:

" ಭೂಮ್ಯಾಕಾಶಗಳನ್ನು ಉಂಟುಮಾಡಿದ ಪರಾತ್ಪರ ದೇವರ ಆಶೀರ್ವಾದ ಅಬ್ರಾಮನಿಗಿರಲಿ;  ನಿನ್ನ ಶತ್ರುಗಳನ್ನು ನಿನ್ನ ಕೈವಶಮಾಡಿದ ಆ ಪರಾತ್ಪರ ದೇವರಿಗೆ ಸ್ತೋತ್ರವಾಗಲಿ!" ಅಬ್ರಾಹಮನು ತಾನು ಗೆದ್ದು ತಂದಿದ್ದ ಎಲ್ಲ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕಿಸದೇಕನಿಗೆ ಕೊಟ್ಟನು.

ಪ್ರಭುವಿನ ವಾಕ್ಯ

ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 110:1-4.V.4

ಶ್ಲೋಕ:  ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನಿರುತ.

1.  ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ|
ಆಸೀನನಾಗಿರು ನೀನು ನನ್ನ ಬಲಗಡೆಗೆ|
ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ||
ಶ್ಲೋಕ
2.  ಸಿಯೋನಿನ ಹೊರಗು ವಿಸ್ತರಿಸುವನು|
ಪ್ರಭು ನಿನ್ನ ರಾಜ್ಯದಾಳಿಕೆಯನು||
ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೇ|
ದೊರೆತನ ಮಾಡುವೆ ನೀನು||
ಶ್ಲೋಕ
3.  ಸೇನೆಯನು ನೀ ಅಣಿಗೊಳಿಸುವ ದಿನದೊಳು|
ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು||
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು|
ಉದಯಕಾಲದ ಇಬ್ಬನಿಯಂತೆ ಇಳಿದು ಬರುವರು||
ಶ್ಲೋಕ
4.  ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನಿರುತ|
ಬದಲಿಸನು ಪ್ರಭು ತಾನಿತ್ತ ಪ್ರಮಾಣದ ಈ ಮಾತ||
ಶ್ಲೋಕ

ಎರಡನೆಯ ವಾಚನ
ಪೌಲನು ಕೊರಿಂಥಿಯರಿಗೆ ಬರೆದ ಮೊದಲನೆಯ ಪತ್ರದಿಂದ ಇಂದಿನ ಎರಡನೆಯ ವಾಚನ 11:23-26


ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂಲೇ ಪಡೆದೆನು.  ಅದೇನೆಂದರೆ;  ಪ್ರಭು ಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ, ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ, "ಎಂದರು.  ಅಂತೆಯೇ ಭೋಜನದ ಕೊನೆಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ, " ಎಂದರು.  ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ, ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.
ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಘೋಷಣೆ ಯೊವಾನ್ನ 6:51
ಅಲ್ಲೆಲೂಯ, ಅಲ್ಲೆಲೂಯ!
ನಾನೇ ಸ್ವರ್ಗದಿಂದ ಇಳಿದುಬಂದ ಜೀವಂತ ರೊಟ್ಟಿ | ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ ||
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 9:11-17
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ


ಆ ಕಾಲದಲ್ಲಿ ಯೇಸು ತಮ್ಮನ್ನು ಹಿಂಬಾಲಿಸುತ್ತಿದ್ದ ಜನಸಮೂಹವನ್ನು  ಸ್ವಾಗತಿಸಿ, ದೇವರ ಸಾಮ್ರಾಜ್ಯದ ವಿಷಯವಾಗಿ ಹೇಳಿ ಅಗತ್ಯವಿದ್ದವರಿಗೆ ಆರೋಗ್ಯದಾನ ಮಾಡಿದರು.  ಅಷ್ಟರಲ್ಲಿ ಸಾಯಂಕಾಲವಾಗುತ್ತಾ ಬಂದಿತು.  ಹನ್ನೆರಡು ಮಂದಿ ಪ್ರೇಷಿತರು ಯೇಸುವಿನ ಬಳಿಗೆ ಬಂದು, " ಇದು ನಿರ್ಜನ ಪ್ರದೇಶ; ಜನರನ್ನು ಕಳುಹಿಸಿಬಿಡಿ.  ಅವರು ಸಮೀಪದ ಊರುಕೇರಿಗಳಿಗೂ ಹೋಗಿ ಊಟವಸತಿಯನ್ನು ಒದಗಿಸಿಕೊಳ್ಳಲಿ, "ಎಂದರು.  ಅದಕ್ಕೆ ಯೇಸು, "ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ," ಎಂದರು.  ಅವರು, "ನಮ್ಮಲ್ಲಿರುವುದು ಐದು ರೊಟ್ಟಿ ಮತ್ತು ಎರಡು ಮೀನು ಮಾತ್ರ.  ನಾವು ಹೋಗಿ ಇವರೆಲ್ಲರಿಗೆ ಬೇಕಾಗುವಷ್ಟು ಊಟ ಕೊಂಡುಕೊಂಡು ಬರಬೇಕೇ? "ಎಂದರು.  ಏಕೆಂದರೆ ಅಲ್ಲಿ ಗಂಡಸರೇ ಸುಮಾರು ಐದು ಸಾವಿರ ಮಂದಿ ಇದ್ದರು.  ಆಗ ಯೇಸು ಶಿಷ್ಯರಿಗೆ, "ಇವರನ್ನು ಐವತ್ತು ಐವತ್ತರಂತೆ ಪಂಕ್ತಿಯಾಗಿ ಕೂರಿಸಿರಿ, "ಎಂದು ಹೇಳಲು ಅವರು ಹಾಗೆಯೇ ಎಲ್ಲರನ್ನು ಕುಳ್ಳರಿಸಿದರು.  ಅನಂತರ ಯೇಸು ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು.  ತರುವಾಯ ಅವುಗಳನ್ನು ಮುರಿದು ಜನಸಮೂಹಕ್ಕೆ ಬಡಿಸುವಂತೆ ಶಿಷ್ಯರಿಗೆ ಕೊಟ್ಟರು.  ಎಲ್ಲರೂ ಹೊಟ್ಟೆ ತುಂಬ ತಿಂದು ಸಂತೃಪ್ತರಾದರು.  ಇನ್ನು ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿ ತುಂಬ ಆದವು.

ಪ್ರಭುವಿನ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

21.06.2025 - ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ

 ಮೊದಲನೇ ವಾಚನ: 2 ಕೊರಿಂಥಿಯರಿಗೆ 12:1-10 


ಸಹೋದರರೆ, ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಆದುದರಿಂದ ಪ್ರಭು ನನಗಿತ್ತ ದರ್ಶನಗಳನ್ನು ಮತ್ತು ಶ್ರುತಪಡಿಸಿದ ಸತ್ಯಗಳನ್ನು ಕುರಿತು ಹೇಳುತ್ತೇನೆ; ಕ್ರೆöÊಸ್ತನಾದ ಒಬ್ಬ ವ್ಯಕ್ತಿಯನ್ನು ನಾನು ಬಲ್ಲೆ. ಅವನು ಹದಿನಾಲ್ಕು ವರ್ಷಗಳಿಗೆ ಹಿಂದೆ ಮಹೋನ್ನತ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ದೇಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು. ಅವನು ಪರಂಧಾಮಕ್ಕೆ ಒಯ್ಯಲ್ಪಟ್ಟನೆಂಬುದು ನಿಶ್ಚಯ. ದೇಹಸಹಿತವಾಗಿಯೋ ದೇಹರಹಿತವಾಗಿಯೋ ಅದನ್ನು ನಾನರಿಯೆ. ದೇವರೊಬ್ಬರೇ ಬಲ್ಲರು. ಅಲ್ಲಿ ಅವನಿಗೆ ಕೇಳಿ ಬಂದ ವಿಷಯಗಳು ಮಾನವನ ವರ್ಣನೆಗೆ ಎಟುಕದವು. ಮಾನವನ ನುಡಿಗೆ ನಿಲುಕದವು. ಅವನನ್ನು ಕುರಿತು ನಾನು ಹೆಮ್ಮೆಪಡುತ್ತೇನೆ. ಆದರೆ ನನ್ನನ್ನು ಕುರಿತು ನಾನು ಹೊಗಳಿಕೊಳ್ಳುವುದಿಲ್ಲ. ನನ್ನ ದೌರ್ಬಲ್ಯವೇ ನನ್ನ ಹೊಗಳಿಕೆ. ಹಾಗೇನಾದರೂ ನಾನು ಹೊಗಳಿಕೊಳ್ಳಲು ಆಶಿಸಿದರೆ ಅದೇನು ಹುಚ್ಚುತನವಲ್ಲ. ಏಕೆಂದರೆ, ನಾನು ನುಡಿಯುತ್ತಿರುವುದು ಸತ್ಯವನ್ನೇ. ಆದರೂ ನಾನು ಹಾಗೆ ಹೊಗಳಿಕೊಳ್ಳುವುದಿಲ್ಲ. ಕಾರಣ, ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು. 

 ನನಗೆ ತಿಳಿಸಲಾದ ಗಹನ ಸತ್ಯಗಳಿಂದ ನಾನು ಉಬ್ಬಿಹೋಗದ ಹಾಗೆ ನನ್ನ ದೇಹದಲ್ಲಿ ಶೂಲದಂತೆ ನಾಟಿರುವ ಬೇನೆಯೊಂದನ್ನು ನನಗೆ ಕೊಡಲಾಯಿತು. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. ಈ ಪೀಡೆ ನನ್ನನ್ನು ಬಿಟ್ಟು ತೊಲಗಲೆಂದು ನಾನು ಮೂರು ಸಾರಿ ಪ್ರಭುವಿನಲ್ಲಿ ಬೇಡಿಕೊಂಡೆ. ಅದಕ್ಕವರು, “ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ,” ಎಂದು ಹೇಳಿದರು. ಕ್ರಿಸ್ತಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಮತ್ತಷ್ಟು ಹೆಮ್ಮೆಪಡುತ್ತೇನೆ. ದುರ್ಬಲತೆಗಳಲ್ಲೂ ದುರವಸ್ಥೆಗಳಲ್ಲೂ ಮಾನನಷ್ಟದಲ್ಲೂ ಕಷ್ಟಹಿಂಸೆಗಳಲ್ಲೂ, ಆಪತ್ತುವಿಪತ್ತುಗಳಲ್ಲೂ ನಾನು ಕ್ರಿಸ್ತ ಯೇಸುವಿನ ನಿಮಿತ್ತ ಸಂತುಷ್ಟನಾಗಿದ್ದೇನೆ. ನಾನು ಬಲಶಾಲಿಯಾಗಿರುವುದು ಬಲಹೀನನಾಗಿರುವಾಗಲೇ. 

ಕೀರ್ತನೆ: 34:7-8.9-10.11-12

ಶ್ಲೋಕ: ಸವಿದು ನೋಡು ಪ್ರಭುವಿನ ಮಾಧರ‍್ಯವನು
1.ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು 
  ಕಾಯುವನು ಪ್ರಭುವಿನ ದೂತನೆ ಬಂದಿಳಿದು 
  ಸವಿದು ನೋಡು ಪ್ರಭುವಿನ ಮಾಧರ‍್ಯವನು 
  ಆತನನು ಆಶ್ರಯಿಸಿಕೊಂಡವನು ಧನ್ಯನು 

2.ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ 
  ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ 
 ಯುವ ಕೇಸರಿಗೆ ಇರಬಹುದು ಹಸಿವು, ದಾಹ 
  ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ 

3. ಬನ್ನಿ ಮಿತ್ರರೇ, ಆಲಿಸಿರೀ ಮಾತನು 
   ಕಲಿಸುವೆನು ನಾ ನಿಮಗೆ ದೇವ ಭಯವನು 
   ಎಲೆ ಮಾನವ, ಬಲುದಿನ ಬಾಳಲು ಬಯಸುವೆಯಾ? 
   ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ

ಶುಭಸಂದೇಶ: ಮತ್ತಾಯ 6:24-34



ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು:
" ಯಾರೂ ಇಬ್ಬರು ಯಜಮಾನರಿಗೆ ಜೀತ ಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ, ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು. ನಾನು ಹೇಳುವುದನ್ನು ಕೇಳಿ: 'ಪ್ರಾಣಧಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹ ರಕ್ಷಣೆಗೆ ಏನು ಹೊದೆಯುವುದು' ಎಂದು ಚಿಂತೆ ಮಾಡಬೇಡಿ. ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೆ? ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಗಮನಿಸಿರಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೆ? ಚಿಂತಿಸಿ, ಚಿಂತಿಸಿ ನಿಮ್ಮ ಜೀವನಾವಧಿಯನ್ನು ಕೊಂಚ ಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು? ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನ ಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ : ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಆದರೂ ಅರಸ ಸೊಲೋಮೋನನು ತನ್ನ ಸರ್ವ ವೇಭವದಲ್ಲಿ ಇದ್ದಾಗಲೂ ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ? ಆದುದರಿಂದ ತಿನ್ನಲು ಎನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ. ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ ಎಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ; ಇಂದಿನ ಪಾಡೇ ಇಂದಿಗೆ ಸಾಕು."

18.06.2025 - "ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."

 ಮೊದಲನೇ ವಾಚನ: 2 ಕೊರಿಂಥಿಯರಿಗೆ 9:6-11


ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯತ್ತಾನೆ. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ. ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ. ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು. ನೀವು ಸದಾ ಉದಾರಿಗಳಾಗಿರುವಂತೆ ನಿಮ್ಮನ್ನು ಎಲ್ಲಾ ವಿಧದಲ್ಲೂ ಸಿರಿವಂತರನ್ನಾಗಿ ಮಾಡುವರು. ನಿಮ್ಮ ಕೊಡುಗೆ ನಮ್ಮ ಸೇವೆಯ ಮೂಲಕ ಬೇರೆಯವರಿಗೆ ತಲುಪಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ಮಾಡುವುದು.

ಕೀರ್ತನೆ: 112:1-2, 3-4, 9
ಶ್ಲೋಕ: ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು

ಅಲ್ಲೆಲೂಯ ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು
ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು
ಬಲಿಷ್ಠವಾಗುವುದು ಜಗದೊಳು ಅವನ ಸಂತಾನ
ಸಜ್ಜನರ ಸಂತತಿ ಪಡೆವುದು ಆಶೀರ್ವಚನ ಶ್ಲೋಕ

ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ಧಿಯಾಗಿ
ನೀತಿ ಫಲಿಸುವುದು ಆತನ ಮನದಲಿ ಶಾಶ್ವತವಾಗಿ
ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು
ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು ಶ್ಲೋಕ

ಉದಾರತೆಯಿಂದ ಕೊಡುವನು ಬಡವರಿಗೆ
ಫಲಿಸುವುದು ಅವನಾ ನೀತಿ ಸದಾಕಾಲಕೆ
ಮಹಿಮೆತರುವ ಕೋಡುಮೂಡುವುದು ಅವನಿಗೆ ಶ್ಲೋಕ

ಶುಭಸಂದೇಶ: ಮತ್ತಾಯ 6:1-6, 16-18

"ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."

14.06.2025 - ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲ್ಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು.

ಮೊದಲನೇ ವಾಚನ: 2 ಕೊರಿಂಥಿಯರಿಗೆ 5:14-21

ಯೇಸುಕ್ರಿಸ್ತರ ಪ್ರೀತಿಯ ಪಾಲನೆಗೆ ನಾವು ಒಳಗಾಗಿದ್ದೇವೆ. ಎಲ್ಲಾ ಮಾನವರಿಗೋಸ್ಕರ ಒಬ್ಬನು ಮರಣಹೊಂದಿದನು. ಆದ್ದರಿಂದ ನಾವೆಲ್ಲರೂ ಆ ಮರಣದಲ್ಲಿ ಪಾಲುಗಾರರು. ಸರ್ವರಿಗೂ ಯೇಸು ಪ್ರಾಣತ್ಯಾಗಮಾಡಿದರು. ಪರಿಣಾಮವಾಗಿ, ಇನ್ನು ಮುಂದೆ ಜೀವಿಸುವವರು ತಮಗಾಗಿ ಜೀವಿಸದೆ, ಸತ್ತು ಪುನರುತ್ಥಾನರಾದ ಯೇಸುವಿಗಾಗಿ ಜೀವಿಸಬೇಕು. 

ಇನ್ನು ಮುಂದೆ ನಾವು ಯಾರನ್ನೂ ಕೇವಲ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಂದು ಕಾಲದಲ್ಲಿ, ಕ್ರಿಸ್ತಯೇಸುವನ್ನು ನಾವು ಹಾಗೆ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ. ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮ ತಳೆದಿದೆ. ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನ ಪಡಿಸಿಕೊಂಡಿದ್ದಾರೆ. ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ. ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ. 

 ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆAದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬoಧವನ್ನು ಪಡೆಯಲೆಂದೇ ಹೀಗೆ ಮಾಡಿದರು. 

ಕೀರ್ತನೆ:103:1-2.3-4.8-10.12-13


ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು

  1.ಭಜಿಸು ನನ್ನ ಮನವೇ,ಭಜಿಸು ಪ್ರಭುವನು 

  ನನ್ನ ಅಂತರoಗವೇ, ಭಜಿಸು ಆತನನು

  ನೆನೆ ಆತನ ಪರಮಪಾವನ ನಾಮವನು 

  ಭಜಿಸು ನನ್ನ ಮನವೇ, ಭಜಿಸು ಪ್ರಭುವನು 

  ಮರೆಯದಿರು ಆತನ ಉಪಕಾರಗಳೊಂದನು

2. ಮನ್ನಿಸುವನಾತ ನನ್ನ ದೋಷಗಳನು 

  ವಾಸಿಮಾಡುವನು ನನ್ನ ರೋಗಗಳನು

  ಉಳಿಸುವನು ಪಾತಾಳದ ಕೂಪದಿಂದ ನನ್ನನು

  ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು 


3. ಪ್ರಭು ದಯಾಳು, ಕೃಪಾಪೂರ್ಣನು 

  ಆತನು ಸದಾ ತಪ್ಪು ಹುಡುಕುವವನಲ್ಲ 

  ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ 

  ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ 

   ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ 

4. ಪಡುವಣದಿಂದ ಮೂಡಣವೆಷ್ಟೋ ದೂರ 

   ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ 

   ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ 

   ಕನಿಕರಿಸುವನಾತ ತನಗೆ ಅಂಜುವವರಿಗೆ 


ಶುಭಸಂದೇಶ: ಮತ್ತಾಯ 5:33-37

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: " ’ಸುಳ್ಳಾಣೆಯಿಡಬೇಡ; ದೇವರಿಗೆ ಆಣೆಯಿಟ್ಟು ವಾಗ್ದಾನ ಮಾಡಿದಂತೆ ನಡೆದುಕೊಳ್ಳಲೇ ಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ. ಈಗ ನಾನು ಹೇಳುವುದನ್ನು ಕೇಳಿ: ನೀವು ಆಣೆಯಿಡಲೇ ಬೇಡಿ. ಆಕಾಶದ ಮೇಲೆ ಆಣೆಯಿಡಬೇಡಿ, ಅದು ದೇವರ ಸಿಂಹಾಸನ; ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ; ನಿಮ್ಮ ತಲೆಯ ಮೇಲೂ ಆಣೆಯಿಡಬೇಡಿ; ಹಾಗೆ ಆಣೆಯನ್ನಿಟ್ಟು ಅದರ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲ್ಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು.”

13-06-2025 - ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು

ಮೊದಲನೇ ವಾಚನ: 2 ಕೊರಿಂಥಿಯರಿಗೆ 4:7-15

ಸಹೋದರರೆ ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ, ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ. ನಾವು ಇಕ್ಕಟ್ಟು ಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ. ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ. ಯೇಸುವಿನ ದಿವ್ಯಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ. ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ. ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ. 

 “ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು,” ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ೧೫ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾ ಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು. 

ಕೀರ್ತನೆ: 56:4.12.13

ಶ್ಲೋಕ: ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ 

1.ದೇವರಲ್ಲೇ ನಿರ್ಭೀತ ನಂಬಿಕೆ ನನಗೆ

ಹೆಮ್ಮೆ ಪಡುವೆನು ಆತನಿತ್ತ ವಾಗ್ದಾನಕೆ 

2.ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯಮಾಡಿರುವೆ 

ಮೃತ್ಯುವಿನಿಂದೆನ್ನ ಪ್ರಾಣವನು ನೀ ಮುಕ್ತಗೊಳಿಸಿರುವೆ 

ಜಾರಿ ಬೀಳದಂತೆನ್ನ ಪಾದಗಳನು ಕಾದಿರಿಸಿರುವೆ 

3.ಎಂದೇ ನಿನಗೆ ಹೊತ್ತ ಹರಕೆಗಳನು ಸಲ್ಲಿಸುವೆ 

ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ 


ಶುಭಸಂದೇಶ: ಮತ್ತಾಯ 5:27-32


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ; ಆದರೆ ನಾನು ಹೇಳುತ್ತೇನೆ, ಕೇಳಿ; ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ. ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು. ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು.” “ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ. ಆದರೆ ನಾನೀಗ ನಿಮಗೆ ಹೇಳುತ್ತೇನೆ ಕೇಳಿ; ತನ್ನ ಹೆಂಡತಿಯ ದುರ್ನಡತೆಯ ಕಾರಣದಿಂದಲ್ಲದೆ, ಅವಳನ್ನು ಬಿಟ್ಟು ಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡ ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ.”