ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:5-8, 14-17
ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕನೆಂದು ಸಾರಿದನು. ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಭುತಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು. ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾರ್ಶ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು. ಇದರಿಂದ ಆ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.
ಸಮಾರಿಯದ ಜನರು ದೇವರ ವಾಕ್ಯವನ್ನು ಸ್ವೀಕರಿಸಿದ ಸಮಾಚಾರ ಪ್ರೇಷಿತರಿಗೆ ಮುಟ್ಟಿತು. ಅವರು ಪೇತ್ರ ಮತ್ತು ಯೊವಾನ್ನರನ್ನು ಅಲ್ಲಿಗೆ ಕಳುಹಿಸಿದರು. ಇವರು ಬಂದು ಆ ಜನರು ಪವಿತ್ರಾತ್ಮ ಅವರ ವರವನ್ನು ಪಡೆಯಲೆಂದು ಅವರಿಗೋಸ್ಕರ ಪ್ರಾರ್ಥನೆಮಾಡಿದರು. ಏಕೆಂದರೆ, ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದಿದ್ದರೇ ಹೊರತು ಅವರಲ್ಲಿ ಯಾರ ಮೇಲೂ ಆ ವರವು ಬಂದಿರಲಿಲ್ಲ. ಪ್ರೇಷಿತರು ಅವರ ಮೇಲೆ ಹಸ್ತನಿಕ್ಷೇಪ ಮಾಡಲು ಅವರು ಪವಿತ್ರಾತ್ಮ ವರವನ್ನು ಪಡೆದರು.
ಕೀರ್ತನೆ: 66:1-3, 4-5, 6-7, 16, 20
ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I
ಹಾಡಲಿ ಆತನ ಶ್ರೀನಾಮ ಮಹಿಮೆಗೆ II
“ನಿನ್ನ ಕಾರ್ಯಗಳೆನಿತೋ ಚೇತೋಹಾರಿ I
ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II
ಜಗವೆಲ್ಲ ಪೂಜಿಪುದು ನಿನ್ನನು I
ಪೊಗಳಿ ಮಾಳ್ಪುದು ಗುಣಗಾನವನು I
ಕೀರ್ತಿಸುವುದು ನಿನ್ನ ನಾಮವನು” II
ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I
ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ
ಒಣನೆಲವಾಗಿ ಮಾರ್ಪಡಿಸಿದ ಕಡಲನು I
ಕಾಲು ನಡೆಯಲೇ ದಾಟಿಸಿದ ನದಿಯನು I
ಇದ ನಿಮಿತ್ತ ಪಡೆಯೋಣ ಆನಂದವನು II
ಆತನಾಳ್ವಿಕೆ ಶಕ್ತಿಯುತ, ನಿರಂತರ I
ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I
ಜಂಬ ಕೊಚ್ಚದಿರಲಿ ದಂಗೆಕೋರ II
ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I
ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ I
ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I
ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II
ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ
ಎರಡನೇ ವಾಚನ: 1 ಪೇತ್ರನು 3:15-18
ಸಹೋದರರೇ, ಕ್ರಿಸ್ತಯೇಸುವನ್ನು ಪ್ರಭುವೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿರಿ. ನಿಮ್ಮಲ್ಲಿರುವ ನಂಬಿಕೆ ನಿರೀಕ್ಷೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ತಕ್ಕ ಉತ್ತರ ಕೊಡಲು ಸರ್ವದಾ ಸಿದ್ಧರಾಗಿರಿ. ಹಾಗೆ ಉತ್ತರ ಕೊಡುವಾಗ ಮರ್ಯಾದೆಯಿಂದಲೂ ಶಾಂತಿಸಮಾಧಾನದಿಂದಲೂ ಮಾತನಾಡಿ. ನಿಮ್ಮ ಮನಸ್ಸಾಕ್ಷಿ ಶುದ್ಧವಾಗಿರಲಿ. ಆಗ ಉತ್ತಮವಾದ ನಿಮ್ಮ ಕ್ರಿಸ್ತೀಯ ವರ್ತನೆಯನ್ನು ಕಂಡು ದೂಷಿಸಿದವರು, ನಿಮ್ಮನ್ನು ನಿಂದಿಸಿದ್ದಕ್ಕಾಗಿ ತಾವೇ ನಾಚಿಕೆಪಡುವರು. ಕೆಟ್ಟದ್ದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದಕ್ಕಿಂತ ದೇವರ ಚಿತ್ತವಾದರೆ, ಒಳ್ಳೆಯದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದೇ ಲೇಸು. ಅಂತೆಯೇ ಕ್ರಿಸ್ತಯೇಸು ನೀತಿವಂತರಾಗಿದ್ದರೂ ಅನೀತಿವಂತರಿಗಾಗಿ ಪ್ರಾಣತ್ಯಾಗಮಾಡಿದರು. ಪಾಪ ನಿವಾರಣಾರ್ಥವಾಗಿ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವಂತರಾದರು.
ಶುಭಸಂದೇಶ: ಯೊವಾನ್ನ 14:15-21
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ. ನಾನೂ ಪಿತನನ್ನು ಕೇಳಿಕೊಳ್ಳುವೆನು; ಅವರು ನಿಮಗೆ ಬೇರೊಬ್ಬ ಪೋಷಕರನ್ನು ಕೊಡುವರು. ಇವರು ನಿಮ್ಮೊಡನೆ ಯಾವಾಗಲೂ ಇರುವರು. ಸತ್ಯಸ್ವರೂಪಿಯಾದ ಪವಿತ್ರಾತ್ಮನೇ ಈ ಪೋಷಕ. ಲೋಕವು ಇವರನ್ನು ಬರಮಾಡಿಕೊಳ್ಳದು. ಏಕೆಂದರೆ ಲೋಕ ಇವರನ್ನು ಕಾಣುವುದೂ ಇಲ್ಲ, ಅರಿತುಕೊಳ್ಳುವುದೂ ಇಲ್ಲ. ಆದರೆ ನೀವು ಇವರನ್ನು ಅರಿಯುವಿರಿ. ಕಾರಣ, ಇವರು ನಿಮ್ಮೊಂದಿಗೂ ನಿಮ್ಮಲ್ಲಿಯೂ ನೆಲಸಿರುವರು. ನಾನು ನಿಮ್ಮನ್ನು ಅನಾಥರನ್ನಾಗಿ ಬಿಟ್ಟುಹೋಗುವುದಿಲ್ಲ. ನಿಮ್ಮ ಬಳಿಗೆ ಪುನಃ ಬರುತ್ತೇನೆ. ಇನ್ನು ತುಸುಕಾಲವಾದ ನಂತರ ಲೋಕವು ನನ್ನನ್ನು ಕಾಣದು. ಆದರೆ ನೀವು ನನ್ನನ್ನು ಕಾಣುವಿರಿ. ನಾನು ಜೀವಿಸುವವನಾಗಿರುವುದರಿಂದ ನೀವೂ ಜೀವಿಸುವಿರಿ. ನಾನು ನನ್ನ ಪಿತನಲ್ಲಿ ಇರುವೆನು; ನೀವು ನನ್ನಲ್ಲಿ ಇರುವಿರಿ ಮತ್ತು ನಾನು ನಿಮ್ಮಲ್ಲಿ ಇರುವೆನು. ಇದನ್ನು ಆ ದಿನದಂದು ನೀವು ಅರಿತುಕೊಳ್ಳುವಿರಿ. ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿಕೊಡುವೆನು.”
No comments:
Post a Comment