ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

04.12.22 - "ಸರ್ವೇಶ್ವರನಿಗೆ ಮಾರ್ಗವನ್ನು ಸಿದ್ಧಪಡಿಸಿರಿ"

ಮೊದಲನೇ ವಾಚನ: ಯೆಶಾಯ 11:1-10 


ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು. ನೆಲಸುವುದಾತನ ಮೇಲೆ ಜ್ಞಾನವಿವೇಕದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ ಸರ್ವೇಶ್ವರನ ಭಯಭಕ್ತಿ ಆತನಿಗೆ ಪರಿಮಳದಂತೆ ತೀರ್ಪಿಡನಾತ ಕಣ್ಣಿಗೆ ತೋಚಿದಂತೆ, ನಿರ್ಣಯಿಸನಾತ ಕಿವಿಗೆ ಬಿದ್ದಂತೆ. ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯ ನೀತಿಯಿಂದ; ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ; ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ; ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ. ಸದ್ಧರ್ಮವೇ. ಆತನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟ-ಪಟ್ಟಿ. ಬಾಳುವುವು ತೋಳ ಕುರಿಮರಿಗಳು ಒಂದಿಗೆ, ಮಲಗುವುವು ಮೇಕೆ ಚಿರತೆಗಳು ಜೊತೆಗೆ; ಮೊಲೆಯುಣ್ಣುವುವು ಕರು ಕೇಸರಿಗಳು ಒಟ್ಟಿಗೆ, ನಡೆಸುವುದವುಗಳನು ಚಿಕ್ಕ ಮಗು ಮೇಯಿಸುವುದಕೆ ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ, ಮಲಗುವುವು ಅವುಗಳ ಮರಿಗಳು ಜೊತೆಗೆ; ಎತ್ತಿನ ಹುಲ್ಲು ಮೇವಾಗುವುದು ಸಿಂಹಕ್ಕೆ. ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ, ಕೈ ಹಾಕುವುದು ಮೊಲೆ ಬಿಟ್ಟ ಮಗು ಹಾವಿನ ಬಿಲದ ಒಳಗೆ, ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ ಧರೆಯ ಮೇಲೆ. ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವ ಜನಾಂಗಗಳಿಗೆ ಧ್ಯಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.

ಕೀರ್ತನೆ:1-2, 7-8, 12-13, 17 

ಶ್ಲೋಕ: ಬೆಳೆಯಲಿ ಆತನ ಪಾಲನೆಯಲಿ ನ್ಯಾಯ ನೀತಿ ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ  ಶಾಂತಿ 

1. ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ |
    ಕಲಿಸು ನಿನ್ನ ನೀತಿಯನು ರಾಜಕುವರನಿಗೆ ||
    ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ |
    ಪರಿಪಾಲಿಸಲಿ ದೀನ ದಲಿತರನು ನ್ಯಾಯದಿಂದ ||

2. ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ |
    ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ ||
    ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ |
    ಮಹಾನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ ||

3. ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು |
    ಉದ್ಧರಿಸುವನಾತ  ದಿಕ್ಕಿಲ್ಲದ ದೀನದಲಿತರನು ||
    ದೀನದರಿದ್ರರಿಗೆ ದಯೆಯ ತೋರುವನು |
   ದಲಿತರ ಪ್ರಾಣವನು ಕಾಪಾಡುವನು ||

4. ಶಾಶ್ವತವಾಗಲಿ ಶ್ರೀನಾಮ ಆತನಿಗೆ |
    ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ ||
    ಆತನಾಶೀರ್ವಾದ ಕೋರಲಿ ಸರ್ವರು ತಮಗೆ |
    ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ ||

ಎರಡನೇ ವಾಚನ: ರೋಮನರಿಗೆ 15:4-9 

ಸಹೋದರರೇ, ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವುದೆಲ್ಲವೂ ನಮ್ಮ ಉಪದೇಶಕ್ಕಾಗಿಯೇ ಬರೆಯಲಾಗಿದೆ. ಪವಿತ್ರ ಗ್ರಂಥ ಪಠಣದಿಂದ ದೊರಕುವ ಸ್ಥೈರಣೆ ಮತ್ತು ಉತ್ತೇಜನದಿಂದಾಗಿ ನಾವು ನಿರೀಕ್ಷೆಯುಳ್ಳವರಾಗಬೇಕೆಂದೇ ಇವೆಲ್ಲಾ ಬರೆಯಲಾಗಿದೆ. ಆ ಸ್ಥೈರಣೆ ಮತ್ತು ಉತ್ತೇಜನದ ಮೂಲವಾಗಿರುವ ದೇವರು, ನೀವೆಲ್ಲರು ಕ್ರಿಸ್ತ ಯೇಸುವನ್ನು ಅನುಸರಿಸುತ್ತಾ ಒಮ್ಮನಸ್ಸಿನಿಂದ ಬಾಳುವಂತೆ ಮಾಡಲಿ. ಹೀಗೆ ಒಮ್ಮನಸ್ಸಿನಿಂದಲೂ ಒಕ್ಕೊರಲಿನಿಂದಲೂ ನಮ್ಮ ಪ್ರಭು ಯೇಸುಕ್ರಿಸ್ತರತಂದೆಯಾದ ದೇವರನ್ನು ಕೊಂಡಾಡುವಂತಾಗಲಿ. ಕ್ರಿಸ್ತ ಯೇಸು ನಿಮ್ಮನ್ನು ಅಂಗೀಕರಿಸಿದಂತೆ ದೇವರ ಮಹಿಮೆಗಾಗಿ ನೀವು ಸಹ ಒಬ್ಬರನ್ನು ಒಬ್ಬರು ಅಂಗೀಕರಿಸಿರಿ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುವಂತೆ ಮತ್ತು ದೇವರು ತೋರಿದ ಕರುಣೆಗಾಗಿ ಅವರನ್ನು ಯೆಹೂದ್ಯರಲ್ಲದವರು ಸಹ ಸ್ತುತಿಸಲು ಸಾಧ್ಯವಾಗುವಂತೆ ಕ್ರಿಸ್ತ ಯೇಸು ಯೇಹೂದ್ಯರಿಗೆ ಅಧೀನರಾದರು. ಇದಕ್ಕೆ ಸಾದೃಶ್ಯವಾಗಿ ಪವಿತ್ರ ಗ್ರಂಥದಲ್ಲಿ ಹೀಗೆಂದು ಹೇಳಲಾಗಿದೆ: "ಈ ಕಾರಣದಿಂದ ನಾನು ಯೆಹೂದ್ಯರಲ್ಲದವರ  ನಡುವೆ ನಿಮ್ಮನ್ನು ಕೊಂಡಾಡುವೆನು, ನಿಮ್ಮ ನಾಮವನ್ನು ಸಂಕೀರ್ತಿಸುವೆನು." 

ಶುಭಸಂದೇಶ: ಮತ್ತಾಯ 3:1-12 

ಆ ಕಾಲದಲ್ಲಿ ಸ್ನಾನಿಕ ಯೊವಾನ್ನನು ಜುದೇಯ ಪ್ರಾಂತ್ಯದ ಬೆಂಗಾಡಿಗೆ ಹೋಗಿ ಬೋಧನೆ ಮಾಡಲು ಪ್ರಾರಂಭಿಸಿದನು. "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯವು ಸಮಿಾಪಿಸಿತು," ಎಂದು ಸಾರಿ ಹೇಳುತ್ತಾ ಬಂದನು. "ಸರ್ವೇಶ್ವರನಿಗೆ ಮಾರ್ಗವನ್ನು ಸಿದ್ಧಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು  ಸರಾಗ ಮಾಡಿರಿ, ಎಂದು ಬೆಂಗಾಡಿನಲ್ಲೊಬ್ಬನು ಘೋಷಿಸುತ್ತಿದ್ದಾನೆ," ಎಂದು ಪ್ರವಾದಿ ಯೆಶಾಯನು ಸೂಚಿಸಿದ ವ್ಯಕ್ತಿ ಈತನೇ. ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು - ಇವೆ ಈತನ ಉಡುಗೆ. ಮಿಡತೆ ಮತ್ತು ಕಾಡು ಜೇನು ಇವೇ ಈತನ ಆಹಾರ. ಜನರು ಜೆರುಸಲೇಮಿನಿಂದಲೂ  ಇಡೀ ಜುದೇಯ ಪ್ರಾಂತ್ಯದಿಂದಲೂ ಜೋರ್ಡಾನ್ ನದಿಯ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಈತನ ಬಳಿಗೆ ಬಳಿಗೆ ಬರುತ್ತಿದ್ದರು; ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ನದಿಯಲ್ಲಿ ಈತನಿಂದ ಸ್ನಾನ ದೀಕ್ಷೆಯನ್ನು ಪಡೆಯುತ್ತಿದ್ದರು. ಫರಿಸಾಯರಲ್ಲೂ ಸದ್ದುಕಾಯರಲ್ಲೂ ಅನೇಕರು ತನ್ನಿಂದ ಸ್ನಾನದೀಕ್ಷೆ ಪಡೆಯಲು ಬರುವುದನ್ನು ಯೊವಾನ್ನನು ನೋಡಿದನು.  ಅವರನ್ನು ಉದ್ದೇಶಿಸಿ, "ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು? ನೀವು ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ. "ಅಬ್ರಹಾಮನೇ ನಮ್ಮ ಪಿತಮಹ" ಎಂದು ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ  ಪ್ರಾಪ್ತವಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ ಮರದ ಬಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು. ಹೃದಯ ಪರಿವರ್ತನೆಯ ಗುರುತಾಗಿ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನ್ನ ನಂತರ ಬರುವ ಒಬ್ಬರು ನಿಮಗೆ ಪವಿತ್ರಾತ್ಮ ಹಾಗೂ ಆಗ್ನಿಯಿಂದ ದೀಕ್ಷಾಸ್ನಾನ ಕೊಡುವರು. ಅವರು ನನಗಿಂತಲೂ ಸಕ್ತರು. ಅವರ ಪಾದರಕ್ಷೆಗಳನ್ನು ಹೊರಲು ಸಹ ನಾನು ಆರ್ಹನಲ್ಲ. ಅವರ ಕೈಯಲ್ಲಿ ಮೊರವಿದೆ; ತಮ್ಮ ಕಣದಲ್ಲಿಯ ರಾಶಿಯನ್ನು ತೂರುವರು. ಗಟ್ಟಿ ಕಾಳನ್ನು ಮಾತ್ರ ಕಣಜಕ್ಕೆ ತುಂಬುವರು; ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟು ಹಾಕುವರು," ಎಂದು ಎಚ್ಚರಿಸಿದನು.




No comments:

Post a Comment