ಮೊದಲನೆಯ ವಾಚನ: ಯೆರೆಮೀಯ 23:5-8
ಸರ್ವೇಶ್ವರ ಹೇಳುವುದನ್ನು ಗಮನಿಸಿರಿ: “ದಿನಗಳು ಬರಲಿವೆ; ಆಗ ನಾನು ದಾವೀದನೆಂಬ ಮೂಲದಿಂದ ಒಂದು ‘ಮೊಳಕೆ’ ಯನ್ನು ಚಿಗುರಿಸುವೆನು. ಆಗ ಸತ್ಪುರುಷ; ರಾಜನಾಗಿ ಆಳುವನು. ವಿವೇಕದಿಂದ ಕಾರ್ಯಸಾಧಿಸುವನು. ಧರೆಯಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು. ಆತನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿ ಇರುವರು. ಇಸ್ರಯೇಲರು ನೆಮ್ಮದಿಯಿಂದ ಬಾಳುವರು. ‘ಯೆಹೋವ ಚಿದ್ಕೇನು’ (ಎಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಆತನಿಗಿರುವುದು. “ಬರಲಿರುವ ಆ ಕಾಲದಲ್ಲಿ ಜನರು, ‘ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವ ಪದ್ಧತಿಯನ್ನು ಬಿಟ್ಟುಬಿಡುವರು. ಬದಲಿಗೆ ‘ಇಸ್ರಯೇಲ್ ಮನೆತನವೆಂಬ ಸಂತಾನವನ್ನು ಉತ್ತರನಾಡಿನಿಂದಲೂ ಅವರನ್ನು ತಳ್ಳಲಾಗಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವರು. ಅವರು ಸ್ವಂತ ನಾಡಿನಲ್ಲಿ ಸುಖವಾಗಿ ಬಾಳುವರು. ಇದು ಸರ್ವೇಶ್ವರನಾದ ನನ್ನ ನುಡಿ."
ಕೀರ್ತನೆ: 72: 1-2, 12-13, 18-19
ಶ್ಲೋಕ: ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ, ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ.
ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ
ಕಲಿಸು ನಿನ್ನ ನೀರಿಯನು ರಾಜಕುವರನಿಗೆ
ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ
ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ||
ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು|
ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು||
ದೀನದರಿದ್ರರಿಗೆ ದಯೆಯ ತೋರುವನು|
ದಲಿತರ ಪ್ರಾಣವನು ಕಾಪಾಡುವನು||
ಸುತ್ಯರ್ಹನು ಸ್ವಾಮಿದೇವನು, ಇಸ್ರಯೇಲರ ದೇವನು|
ಆತನೋರ್ವನೇ ಮಹತ್ಕಾರ್ಯಗಳನು ಎಸಗುವಂತವನು||
ಮಹಿಮಾಯುಕ್ತ ಆತನ ನಾಮಕೆ ಸದಾಕಾಲವು ಸ್ತುತಿ|
ಆಮೆನ್ ಆಮೆನ್ ಭೂಮಂಡಲವೆಲ್ಲಾ ಆತನ ಪ್ರಭಾವ ಪೂರ್ತಿ||
ಶುಭಸಂದೇಶ: ಮತ್ತಾಯ 1:18-24
ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು 'ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ," ಎಂದನು. "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು "ಇಮ್ಮಾನುವೇಲ್" ಎಂದು ಆತನಿಗೆ ಹೆಸರಿಡುವರು" ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು. “ಇಮ್ಮಾನುವೇಲ್" ಎಂದರೆ "ದೇವರು ನಮ್ಮೊಡನೆ ಇದ್ದಾರೆ" ಎಂದು ಅರ್ಥ. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.
No comments:
Post a Comment