ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.10.25 - 'ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು, ' ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ,"

ಮೊದಲನೆಯ ವಾಚನ : ಪೌಲನು ರೋಮನರಿಗೆ ಬರೆದ ಪತ್ರದಿಂದ ಇಂದಿನ ವಾಚನ 8:31-39


ಸಹೋದರರೇ, ಹೀಗಿರುವಲ್ಲಿ ನಾವು ಏನು ಹೇಳೋಣ?  ದೇವರೆ ನಮ್ಮ ಪರ ಇರುವಾಗ ನಮ್ಮನ್ನು ವಿರೋಧಿಸುವವರು ಯಾರು?  ದೇವರು ತಮ್ಮ ಸ್ವಂತ ಪುತ್ರನನ್ನೇ ನಮ್ಮೆಲ್ಲರಿಗಾಗಿ ಕೊಡಲು ಹಿಂಜರಿಯಲಿಲ್ಲ.  ತಮ್ಮ ಪುತ್ರನನ್ನೇ ಬಲಿದಾನವಾಗಿ ಅರ್ಪಿಸಿದ ದೇವರು ಮತ್ತೇನನ್ನು ತಾನೇ ನಮಗೆ ವರದಾನವಾಗಿ ಕೊಡದಿರಲಾರರು?  ದೇವರೆ ಆರಿಸಿಕೊಂಡವರ ಮೇಲೆ ಯಾರು ತಾನೇ ದೋಷಾರೋಪಣೆ ಮಾಡಬಲ್ಲರು?  ದೇವರೇ ಅವರನ್ನು ನಿರ್ದೋಷಿಗಳೆಂದು ನಿರ್ಣಯಿಸಿರುವಾಗ ಅವರನ್ನು ದೋಷಿಗಳೆಂದು ನಿರ್ಣಯಿಸುವವರು ಯಾರು?  ಪ್ರಾಣತ್ಯಾಗಮಾಡಿದ್ದಲ್ಲದೆ ಪುನರುತ್ಥಾನ ಹೊಂದಿದ ಕ್ರಿಸ್ತ ಯೇಸುವೇ ದೇವರ ಬಲಪಾರ್ಶ್ವದಲ್ಲಿದ್ದುಕೊಂಡು ನಮ್ಮ ಪರವಾಗಿ ಬಿನ್ನಯಿಸುತ್ತಿದ್ದಾರೆ.  ಕ್ರಿಸ್ತ ಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ?  ಕಷ್ಟ - ಸಂಕಟ, ಇಕ್ಕಟ್ಟು - ಬಿಕ್ಕಟ್ಟು, ಹಿಂಸೆ - ಬಾಧೆ ಇವುಗಳಿಂದ ಸಾಧ್ಯವೇ? ಇಲ್ಲ. ಹಸಿವು - ನೀರಡಿಕೆ, ನಗ್ನಸ್ಥಿತಿ, ಆಪತ್ತು - ವಿಪತ್ತು ಖಡ್ಗ - ಕಠಾರಿಗಳಿಂದ ಸಾಧ್ಯವೇ? ಎಂದಿಗೂ ಇಲ್ಲ. ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ:  "ದಿನವಿಡೀ ನಿಮಗೋಸ್ಕರವೇ ಸಾವಿಗೀಡಾಗುತಿಹೆವು ನಾವು;   ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಪರಿಗಣಿತರಾಗುತಿಹೆವು ನಾವು." ನಮ್ಮನ್ನು ಪ್ರೀತಿಸಿದ ಯೇಸು ಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.  ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ, ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸು ಕ್ರಿಸ್ತರಲ್ಲಿ ತೋರಿಬಂದ ದೈವ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು.  ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಿನ ಲೋಕವಾಗಲಿ, ಸೃಷ್ಟಿ ಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ, ಇದು ನಿಶ್ಚಯ.


ಪ್ರಭುವಿನ ವಾಕ್ಯ

ದೇವರಿಗೆ ಕೃತಜ್ಞತೆ ಸಲ್ಲಲಿ


🌹✝️🌹


ಕೀರ್ತನೆ

109:21-22,26-27,30-31, v. 26


ಶ್ಲೋಕ:  ಹೇ ಪ್ರಭೂ, ಅಚಲ ಪ್ರೀತಿಯಿಂದ ನನ್ನ ರಕ್ಷಿಸಯ್ಯಾ.


1.  ಹೇ ಪ್ರಭು ದೇವಾ, ನನ್ನನ್ನಾದರಿಸು ಅಕ್ಕರೆಯಿಂದ|

ನನ್ನ ಪಕ್ಷವಹಿಸಿ ರಕ್ಷಿಸು ನಿನ್ನ ನಾಮದ ಪ್ರಯುಕ್ತ||

ಬಡವ ನಾನು, ನನಗಿದೆ ಕುಂದುಕೊರತೆ|

ನನ್ನ ಎದೆಗೆ ಅಲಗೇ ನಾಟಿದಂತಿದೆ||

ಶ್ಲೋಕ


2.  ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ|

ಅಚಲ ಪ್ರೀತಿಯಿಂದ ನನ್ನ ರಕ್ಷಿಸಯ್ಯಾ||

ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು ಅವರು ಅರಿಯಲಿ|

ಅದು ನಿನ್ನಿಂದಲೇ ಹೇ ಪ್ರಭೂ, ಆದುದೆಂದು ಖಚಿತವಾಗಲಿ||

ಶ್ಲೋಕ


3.  ಕೊಂಡಾಡುವೆನು ಪ್ರಭುವನು ಬಹಳವಾಗಿ|

ಕೀರ್ತಿಸುವೆನು ಆತನನು ಸಾಮೂಹಿಕವಾಗಿ||

ನಿಂತಿರುವನು ಪ್ರಭು ಬಡವನ ಬಲಗಡೆ|

ವಿಧಿಸುವವರಿಂದ ತಪ್ಪಿಸುವನು ಮರಣ ದಂಡನೆ||

ಶ್ಲೋಕ


🌹✝️🌹


ಘೋಷಣೆ

2 ಕೊರಿಂಥಿ. 5:19


ಅಲ್ಲೆಲೂಯ, ಅಲ್ಲೆಲೂಯ!

ದೇವರು ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ; | ಇದನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ ||

ಅಲ್ಲೆಲೂಯ!


ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13:31-35

ಆ ಕಾಲದಲ್ಲಿ ಕೆಲವು ಮಂದಿ ಫರಿಸಾಯರು ಯೇಸುವಿನ ಬಳಿಗೆ ಬಂದು, "ಇಲ್ಲಿಂದ ಹೊರಟುಹೋಗಿಬಿಡಿ, ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿದ್ದಾನೆ, " ಎಂದರು.  ಅದಕ್ಕೆ ಯೇಸು, "ನೀವು ಹೋಗಿ ಆ ನರಿಗೆ ಹೀಗೆಂದು ತಿಳಿಸಿರಿ:  ಇಂದು ಮತ್ತು ನಾಳೆ ದೆವ್ವಗಳನ್ನು ಬಿಡಿಸುತ್ತೇನೆ.  ರೊಗಿಗಳನ್ನು ಗುಣಪಡಿಸುತ್ತೇನೆ, ಮೂರನೆಯ ದಿನ ನನ್ನ ಕಾರ್ಯ ಸಿದ್ಧಿಗೆ ಬರುವುದು.  ಹೇಗೋ ಇಂದು, ನಾಳೆ ಮತ್ತು ನಾಡಿದ್ದು ನಾನು ನನ್ನ ಮಾರ್ಗವನ್ನು ಮುಂದುವರೆಸಬೇಕು ಪ್ರವಾದಿಯಾದವನು ಜೆರುಸಲೇಮಿನ ಹೊರಗೆ ಕೊಲೆಗೀಡಾಗುವುದು ಸಲ್ಲದು.  ಓ ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆ.  ಆದರೆ ನೀನು ಒಪ್ಪಲಿಲ್ಲ.  ಇಗೋ, ನಿಮ್ಮ ದೇವಾಲಯ ಪಾಳು ಬೀಳುವುದು.  'ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು, ' ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ," ಎಂದರು‌‌.

ಪ್ರಭುವಿನ ಶುಭಸಂದೇಶ

ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ

29.10.2025 - ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು,

 ವಾಚನ: ರೋಮನರಿಗೆ 8:26-30

ಅಂತೆಯೇ ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ 
ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಅತ್ಮಧ್ವನಿಯಿಂದ 
ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ. ಅಂತರಂಗಗಳನ್ನು ಈಕ್ಷಿಸುವ ದೇವರು ಪವಿತ್ರಾತ್ಮರ ಇಂಗಿತವೇನೆಂದು ಬಲ್ಲರು. ಏಕೆಂದರೆ, ದೇವರ ಚಿತ್ತದ ಪ್ರಕಾರವೇ ಪವಿತ್ರಾತ್ಮರು ದೇವಜನರಿಗಾಗಿ ಬಿನ್ನವಿಸುತ್ತಾರೆ. ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು. ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ. ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋ ಅವರನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. 
ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ. 
ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.


ಕೀರ್ತನೆ: 13:4-5, 6
ಶ್ಲೋಕ: ಪ್ರಭೂ, ನಿನ್ನಚಲ ಪ್ರೀತಿಯಲ್ಲಿದೆ ನನಗೆ ವಿಶ್ವಾಸ

ಶುಭಸಂದೇಶ: ಲೂಕ 13:22-30

ಯೇಸುಸ್ವಾಮಿ ಊರುರೂಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣಮಾಡುತ್ತಿದ್ದರು. ಆಗ ಒಬ್ಬನು, "ಸ್ವಾಮಿಾ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೋ?", ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, "ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವಪ್ರಯತ್ನಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು. ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ  ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, "ಸ್ವಾಮಿಾ , ನಮಗೆ ಬಾಗಿಲು ತೆರೆಯಿರಿ," ಎಂದು ನೀವು ಕೇಳುವಿರಿ. ಅದಕ್ಕೆ ಅವನು, "ನೀವು ಎಲ್ಲಿಯವರೋ ನಾನು ಅರಿಯೆ" ಎನ್ನುವನು. ಆಗ ನೀವು, "ನಿಮ್ಮೊಂದಿಗೆ ನಾವು ಊಟಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶಮಾಡಿದ್ದೀರಿ," ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, ನೀವು ಎಲ್ಲಿಯವರೋ ನಾನರಿಯೆ. ಅಕ್ರಮಿಗಳೆ, ಎಲ್ಲರೂ ನನ್ನಿಂದ ತೊಲಗಿರಿ," ಎಂದು ಸ್ವಷ್ಟವಾಗಿ ನುಡಿಯುವನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲುಕಡಿತವೇನು!! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟಗಳಲ್ಲಿ ಭಾಗಿಗಳಾಗುವರು. "ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು," ಎಂದರು.

28.10.2025 - ಅವರಿಗೆ "ಪ್ರೇಷಿತರು" ಎಂದು ಹೆಸರಿಟ್ಟರು.

 ವಾಚನ: ಎಫೆಸಿಯರಿಗೆ 2:19-22

ಸಹೋದರರೇ, ನೀವು ಇನ್ನು ಮೇಲೆ ಪರಕೀಯರೂ  ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮಖ್ಯ ಮೂಲೆಗಲ್ಲು. ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ. ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.

ಕೀರ್ತನೆ: 19:2-3, 4-5

ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ

ಶುಭಸಂದೇಶ: ಲೂಕ 6:12-19

ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ "ಪ್ರೇಷಿತರು" ಎಂದು ಹೆಸರಿಟ್ಟರು. ಹೀಗೆ ಅಯ್ಕೆ ಆದವರು: ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಅಂದ್ರೇಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೊಲೊಮಾಯ, ಮತ್ತಾಯ ಮತ್ತು ತೋಮ, ಆಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಆನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯ ಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

27.10.2025 - " ಅಪ್ಪಾ, ತಂದೆಯೇ "

  ವಾಚನ: ರೋಮನರಿಗೆ  8:12-17


ಸಹೋದರರೇ, ನಾವು ಶರೀರಸ್ವಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬಾಳುವ ಹಂಗಿನಲ್ಲೂ ಇಲ್ಲ. ನೀವು ಶರೀರಸ್ವಭಾವಕ್ಕೆ ಅನುಸಾರವಾಗಿ ಬಾಳಿದರೆ ಖಂಡಿತವಾಗಿ ಸಾಯುವಿರಿ. ಪವಿತ್ರಾತ್ಮ ಅವರ ನೆರವಿನಿಂದ ದೈಹಿಕ ದುರಭ್ಯಾಸಗಳನ್ನು ದಮನಮಾಡಿದರೆ ಜೀವಿಸುವಿರಿ. ಯಾರು ಯಾರು ದೇವರ ಆತ್ಮನಿಗೆ ಮಣಿದು ನಡೆಯುತ್ತಾರೋ ಅವರು ದೇವರ ಮಕ್ಕಳು. ದೇವರು ನಿಮಗೆ ದಯಪಾಲಿಸಿರುವ ಆತ್ಮ ನಿಮ್ಮನ್ನು ಮತ್ತೊಮ್ಮೆ ಗುಲಾಮರನ್ನಾಗಿಯೂ ಭಯಭೀತರನ್ನಾಗಿಯೂ ಮಾಡುವುದಿಲ್ಲ. ಬದಲಿಗೆ, ನಿಮ್ಮನ್ನು ದೇವರ ಮಕ್ಕಳನ್ನಾಗಿಸುತ್ತದೆ. ಆ ಆತ್ಮದ ಮೂಲಕವೇ ನಾವು ದೇವರನ್ನು, " ಅಪ್ಪಾ, ತಂದೆಯೇ " ಎಂದು ಕರೆಯುತ್ತೇವೆ. ನಾವು ದೇವರ ಮಕ್ಕಳೆಂಬುದಕ್ಕೆ ದೇವರ ಆತ್ಮ ನಮ್ಮ ಅಂತರಾತ್ಮದೊಂದಿಗೆ ಸಾಕ್ಷಿ ನುಡಿಯುತ್ತಾರೆ. ನಾವು ಮಕ್ಕಳಾಗಿದ್ದರೆ, ಹಕ್ಕುಬಾಧ್ಯತೆ ಉಳ್ಳವರು. ಹೌದು, ದೇವರ ಸೌಭಾಗ್ಯಕ್ಕೆ ಬಾಧ್ಯಸ್ಥರು, ಕ್ರಿಸ್ತ ಯೇಸುವಿನೊಡನೆ ಸಹ ಬಾಧ್ಯಸ್ಥರು. ಕ್ರಿಸ್ತ ಯೇಸುವಿನ ಯಾತನೆಯಲ್ಲೂ ನಾವು ಪಾಲುಗಾರರಾಗಬೇಕು. ಆಗ ಅವರ ಮಹಿಮೆಯಲ್ಲೂ ಪಾಲುಗಾರರಾಗುತ್ತೇವೆ.

ಕೀರ್ತನೆ 68:1, 3, 5-6, 19-20
ಶ್ಲೋಕ: ನಮ್ಮ ದೇವರು ಜೀವೋದ್ಧಾರಕ ದೇವರು.

ಎಚ್ಚರಗೊಳ್ಳಲಿ ದೇವನೆಚ್ಚರಗೊಳ್ಳಲಿ|
ಆತನ ವಿರೋಧಿಗಳು ಪಲಾಯನ ಗೈಯಲಿ||
ಸಜ್ಜನರಾದರೋ ಸಂತೋಷಿಸಲಿ|
ದೇವರ ಮುಂದೆ ಆನಂದಿಸಲಿ|
ಅತುಳ ಹರ್ಷಾನಂದಗೊಳ್ಳಲಿ||

ದಿವ್ಯಧಾಮದಲ್ಲಿಹ ಆ ದೇವ|
ತಬ್ಬಲಿಗೆ ತಂದೆ, ವಿಧವೆಗಾಶ್ರಯ||
ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ|
ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ||

ಸ್ತುತಿಯಾಗಲಿ ನಮ್ಮನುದ್ದರಿಸುವಾ ದೇವನಿಗೆ|
ನಮ್ಮನನುದಿನ ಬಿಡದೆ ಸಹಿಸಿಕೊಳ್ಳುವಾ ದೇವನಿಗೆ||
ನಮ್ಮ ದೇವರು ಜೀವೋದ್ಧಾರಕ ದೇವರು ಹೌದು|
ಸಾವಿಂದ ತಪ್ಪಿಸುವ ಶಕ್ತಿ ಸ್ವಾಮಿ ದೇವರದು||

ಶುಭಸಂದೇಶ: ಲೂಕ 13:10-17

ಆ ಕಾಲದಲ್ಲಿ ಒಂದು ಸಬ್ಬತ್ ದಿನ ಯೇಸು ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಿದ್ದರು. ಹದಿನೆಂಟು ವರ್ಷಗಳಿಂದ ದೆವ್ವಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಈಕೆ ಒಬ್ಬ ಗೂನಿ, ನೆಟ್ಟಿಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, " ನೋಡಮ್ಮಾ, ನೀನು ವ್ಯಾಧಿಯಿಂದ ಬಿಡುಗಡೆಯಾದೆ, " ಎಂದು ಹೇಳಿ, ಆಕೆಯ ಮೇಲೆ ತಮ್ಮ ಹಸ್ತಗಳನ್ನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು. ಯೇಸು ಸಬ್ಬತ್ ದಿನದಲ್ಲಿ ಗುಣಮಾಡಿದ್ದನ್ನು ಕಂಡು, ಪ್ರಾರ್ಥನಾಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, " ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಕೂಡದು, " ಎಂದನು. ಪ್ರಭು, ಅವನಿಗೆ ಪ್ರತ್ಯುತ್ತರವಾಗಿ, " ಕಪಟಿಗಳೇ, ಸಬ್ಬತ್ ದಿನ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೆ? ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು, ಈ ಕಟ್ಟಿನಿಂದ ಈಕೆಯನ್ನು ಸಬ್ಬತ್ ದಿನ ಬಿಡಿಸಬಾರದಿತ್ತೆ? " ಎಂದರು. ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷಪಟ್ಟಿತು.

26.10.2025 -"ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,"

 ವಾಚನ: ಸಿರಾಖ 35:12-14, 16-18


ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಆತ ನ್ಯಾಯಾಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ ಬಡವನ ವಿರೋಧವಾಗಿ ಯಾರನ್ನೂ ಅಂಗೀಕರಿಸನಾತ ಅನ್ಯಾಯಕ್ಕೀಡಾದವನ ಮೊರೆಯನು ಆಲಿಸುವನಾತ. ತಿರಸ್ಕರಿಸನಾತ ಯಾವ ದಿಕ್ಕುದೆಸೆಯಿಲ್ಲದವರ ವಿನಂತಿಯನು ಅಂಗೀಕೃತನಾಗುವನು ಇಂಥವನ ಪ್ರಾರ್ಥನೆ ಮುಟ್ಟುವುದು ಗಗನಮಂಡಲವನು. ಮೇಘಮಂಡಲವನು ದಾಟುವುದು ದೀನನ ಪ್ರಾರ್ಥನೆ ಅವನಿಗೆ ಉಪಶಮನವೇ ಇರದು ಅದು ದೇವರ ಸನ್ನಿದಿ ಸೇರುವವರೆಗೆ. ಅವನು ಅಲ್ಲಿಂದ ಏಳುವುದಿಲ್ಲ ಮಹೋನ್ನತನು ಸದುತ್ತರ ಕೊಡುವವರೆಗೆ ಆತ ಉತ್ತರ ಕೊಡುವುದು ನ್ಯಾಯತೀರಿಸಿದ ನಂತರವೇ.

ಕೀರ್ತನೆ: 34:2-3, 17-18, 19, 23
ಶ್ಲೋಕ: ನಿರ್ಗತಿಗನು ಮೊರೆಯಿಡಲು ಪ್ರಭು ಕಿವಿಗೊಟ್ಟನು

ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 16-18

ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗು ಕೊಡುವರು. ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ದೇವರು ಅವರನ್ನು ಕ್ಷಮಿಸಲಿ. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಾಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ. ಆಮೆನ್.

ಶುಭಸಂದೇಶ: ಲೂಕ 18:9-14

ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: "ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: "ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು.ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ." ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, "ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ," ಎನ್ನುತ್ತಾ ಎದೆಬಡಿದುಕೊಂಡ. ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

No comments:

25.10.2025 -ಶರೀರ ಸ್ವಭಾವದಲ್ಲೇ ಮಗ್ನರಾಗಿರುವ ಮನಸ್ಸು ದೇವರಿಗೆ ಶತ್ರು.

 ವಾಚನ: ರೋಮನರಿಗೆ 8:1-11


ಸಹೋದರರೇ, ಈಗ ಕ್ರಿಸ್ತಯೇಸುವಿನಲ್ಲಿ ಇರುವವರಿಗೆ ದಂಡನಾತೀರ್ಪು ಇರುವುದಿಲ್ಲ. ಏಕೆಂದರೆ ಕ್ರಿಸ್ತಯೇಸುವಿನಲ್ಲಿ ಇರುವವರಿಗೆ ಜೀವವನ್ನು ತರುವ ಪವಿತ್ರಾತ್ಮ ನಿಯಮವು ಪಾಪ - ಮರಣಗಳ ನಿಯಮದಿಂದ ನಿನ್ನನ್ನು ಬಿಡುಗಡೆ ಮಾಡಿದೆ. ಶರೀರ ಸ್ವಭಾವದ ಬಲಹೀನತೆಯ ನಿಮಿತ್ತ ಧರ್ಮಶಾಸ್ತ್ರಕ್ಕೆ ಯಾವುದು ಸಾಧ್ಯವಾಗದೆ ಹೋಯಿತೋ, ಅದು ದೇವರಿಗೆ ಸಾಧ್ಯವಾಯಿತು. ಪಾಪ ಪರಿಹಾರಕ್ಕಾಗಿ ತಮ್ಮ ಸ್ವಂತ ಪುತ್ರನನ್ನು ಪಾಪಾಧೀನವಾದ ನಮ್ಮ ಸ್ವಭಾವದಂಥ ಶರೀರ ಸ್ವಭಾವದಲ್ಲಿ ಕಳುಹಿಸಿಕೊಟ್ಟರು. ಆ ಸ್ವಭಾವದಲ್ಲೇ ಪಾಪಕ್ಕೆ ಮರಣ ದಂಡನೆಯನ್ನು ವಿಧಿಸಿದರು. ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮ ಅವರ ಚಿತ್ತಾಕ್ಕನುಸಾರವಾಗಿ ನಡೆಯುವ ನಮ್ಮಲ್ಲಿ ಧರ್ಮಶಾಸ್ತ್ರದ ನೀತಿನಿಯಮಗಳು ನೆರವೇರುವಂತೆ ದೇವರು ಹೀಗೆ ಮಾಡಿದರು. ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ಶರೀರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ. ಪವಿತ್ರಾತ್ಮ ಅವರಿಗೆ ಅನುಸಾರವಾಗಿ ನಡೆಯುವವರಾದರೋ ಆತ್ಮಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ. ಶರೀರ ಸ್ವಭಾವದಲ್ಲೇ ಮಗ್ನರಾಗಿರುವುದರ ಪರಿಣಾಮ ಸಜ್ಜೀವ ಮತ್ತು ಶಾಂತಿಸಮಾಧಾನ.
ಅಂಥ ಮನಸ್ಸು ದೇವರ ನಿಯಮಕ್ಕೆ ಮಣಿಯುವುದಿಲ್ಲ. ಮಣಿಯಲು ಸಾಧ್ಯವೂ ಇಲ್ಲ. ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ದೇವರನ್ನು  ಮೆಚ್ಚಿಸಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತ ಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತ ಯೇಸುವಿಗೆ ಸೇರಿದವನಲ್ಲ. ಆದರೆ ಕ್ರಿಸ್ತ ಯೇಸು ನಿಮ್ಮಲ್ಲಿ ವಾಸಿಸಿದರೆ, ಪಾಪದ ನಿಮಿತ್ತ ನಿಮ್ಮ ಶರೀರ ಮರಣಕ್ಕೆ ಗುರಿಯಾಗಿದ್ದರೂ ನೀವು ದೇವರೊಡನೆ ಸತ್ಸಂಬಂಧವನ್ನು ಪಡೆದಿರುವುದರಿಂದ ಪವಿತ್ರಾತ್ಮ ನಿಮಗೆ ಜೀವಾಳವಾಗಿರುತ್ತಾರೆ. ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತ ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು.

ಕೀರ್ತನೆ: 24:1-2, 3-4, 5-6
ಶ್ಲೋಕ: ಇಂಥವರೇ ದೇವರ  ದರ್ಶನಾಭ್ಯರ್ಥಿಗಳು

ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ|
ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ||
ಕಡಲನು ತಳಪಾಯವನಾಗಿಸಿದವನು ಆತನೇ|
ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೇ||

ಪ್ರಭುವಿನ ಶಿಖರವನು ಏರಬಲ್ಲವನಾರು?|
ಆ ನಿವಾಸದಲಿ ನಿಲ್ಲಲು ಯೋಗ್ಯನಾರು?||
ಅಂಥವನಿರಬೇಕು ಶುದ್ದ ಹಸ್ತನು, ಸುಮನಸ್ಕನು|
ಅನಾಚಾರಕೆ, ಅಪ್ರಮಾಣಿಕತೆಗೆ ಒಲಿಯನವನು||

ಲಭಿಸುವುದಾತನಿಗೆ ಶುಭ ಪ್ರಭುವಿನಿಂದ|
ನೀತಿಯ ಸತ್ಪಲ ರಕ್ಷಕ ದೇವನಿಂದ ||
ಇಂಥವರೇ ದೇವರ ದರ್ಶನಾಭ್ಯರ್ಥಿಗಳು|
ಇಂಥವರೇ ಯಕೋಬ ದೇವನ ಭಕ್ತಾದಿಗಳು||

ಶುಭಸಂದೇಶ: ಲೂಕ 13:1-9

ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು, "ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ? ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ. ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೇ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸುತ್ತೀರೋ? ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ," ಎಂದರು. ಆನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: "ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. ತೋಟಗಾರನನ್ನು ಕರೆದು, "ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥಮಾಡಬೇಕು?" ಎಂದು ಹೇಳಿದ. ಅದಕ್ಕೆ ತೋಟಗಾರನು, ಸ್ವಾಮಿಾ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ. ಮುಂದಿನ ವರ್ಷ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದುಹಾಕೋಣ," ಎಂದನು.

24.10.2025 - "ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು"

 ವಾಚನ: ರೋಮನರಿಗೆ 7:18-25

ಸಹೋದರರೇ, ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯತನವೆಂಬುದೇನೂ ನೆಲೆಗೊಂಡಿಲ್ಲ. ಇದು ನನಗೆ ಗೊತ್ತು. ಏಕೆಂದರೆ, ಒಳಿತನ್ನು ಮಾಡಬೇಕೆಂಬ ಮನಸ್ಸು ನನಗಿದ್ದರೂ ಅದನ್ನು ಮಾಡಲು ನನ್ನಿಂದ ಆಗುತ್ತಿಲ್ಲ. ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಬಯಸದ ಕೆಟ್ಟದ್ದನ್ನೇ ಮಾಡುವವನಾಗಿದ್ದೇನೆ. ನಾನು ಬಯಸದೆ ಇರುವುದನ್ನೇ ಮಾಡಿದರೆ ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ನಾನು ಒಳಿತನ್ನು ಮಾಡಬಯಸಿದರೂ ಕೇಡು ನನ್ನ ಕೈಬಿಡುತ್ತಿಲ್ಲ. ಇದೇ ಒಂದು ನಿಯಮವಾಗಿ ನನ್ನಲ್ಲಿ ಕಂಡುಬರುತ್ತದೆ. ನನ್ನ ಅಂತರಂಗದಲ್ಲಿ ದೈವ ನಿಯಮವನ್ನು ಕುರಿತು ಆನಂದಿಸುತ್ತೇನೆ. ನನ್ನ ಇಂದ್ರಿಯಗಳಲ್ಲಿಯಾದರೋ ಬೇರೊಂದು ನಿಯಮವನ್ನು ಕಾಣುತ್ತೇನೆ.  ಇದು ನನ್ನ ಅಂತರಂಗ ನಿಯಮಕ್ಕೆ ತದ್ವಿರುದ್ಧವಾಗಿ ಕಾದಾಡುತ್ತದೆ; ನನ್ನ ಇಂದ್ರಿಯಗಳಲ್ಲಿ ನೆಲೆಗೊಂಡಿರುವ ಪಾಪ ನಿಯಮಕ್ಕೆ ನನ್ನನ್ನು ಖೈದಿಯನ್ನಾಗಿಸುತ್ತದೆ. ಅಯ್ಯೋ, ನಾನೆಂಥ ನಿರ್ಭಾಗ್ಯನು! ಸಾವಿನ ದವಡೆಗೆ ಸಿಕ್ಕಿರುವ ಈ ಶರೀರದಿಂದ ನನ್ನನ್ನು ಬಿಡಿಸುವವರು ಯಾರು? ದೇವರೇ. ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಕೃತಜ್ಞತೆ ಸಲ್ಲಲಿ! ನನ್ನಷ್ಟಕ್ಕೆ ನಾನೇ ದೇವರ ನಿಯಮವನ್ನು ಮನಃಪೂರ್ವಕವಾಗಿ ಪಾಲಿಸಲು ಬಯಸುತ್ತೇನೆ. ನನ್ನ ಈ ದೇಹದಲ್ಲಾದರೋ ಪಾಪದ ನಿಯಮಕ್ಕೆ ಬದ್ಧನಾಗಿದ್ದೇನೆ.

ಕೀರ್ತನೆ: 119:66, 68, 76-77, 93-94
ಶ್ಲೋಕ: ಪ್ರಭೂ, ಬೋಧಿಸೆನಗೆ ನಿನ್ನ ನಿಬಂಧನೆಗಳನು

ಶುಭಸಂದೇಶ: ಲೂಕ 12:54-59

ಯೇಸುಸ್ವಾಮಿ ಜನಸಮೂಹವನ್ನು ನೋಡಿ, "ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ಭಾರಿ ಮಳೆ ಬರುತ್ತದೆ ಎನ್ನುತ್ತೀರಿ; ಹಾಗೆಯೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ. ಆಷಾಡಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ? ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು? ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯಾಧಿಕಾರಿಯ ಕೈಗೊಪ್ಪಿಸಬಹುದು ಸೆರೆಯಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು. ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ," ಎಂದರು.

23.10.2025 - "ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ"

 ವಾಚನ: ರೋಮನರಿಗೆ 6:19-23



ಸಹೋದರರೇ, ಇದನ್ನು ಅರ್ಥಮಾಡಿಕೊಳ್ಳಲು ನೀವು ಆಶಕ್ತರಾಗಿರುವುದರಿಂದ ನಾನು ಹೀಗೆ ಸಾಮಾನ್ಯ ರೀತಿಯಲ್ಲಿ ಮಾತನಾಡುತ್ತಿದ್ದೇನೆ. ಹಿಂದೊಮ್ಮೆ ನೀವು ನಿಮ್ಮ ಇಂದ್ರಿಯಗಳನ್ನು ಹೆಚ್ಚುಹೆಚ್ಚಾಗಿ ಅಶ್ಲೀಲತೆಗೂ ಅಕ್ರಮಕ್ಕೂ ಗುಲಾಮರನ್ನಾಗಿಸಿದಿರಿ; ಈಗಲಾದರೋ ಪರಿಶುದ್ಧತೆಗೂ ಸತ್ಸಂಬಂಧಕ್ಕೂ ನಿಮ್ಮ ಇಂದ್ರಿಯಗಳನ್ನು ಅಧೀನರಾಗಿಸಿರಿ. ನೀವು ಪಾಪಕ್ಕೆ ಗುಲಾಮರಾಗಿದ್ದಾಗ ದೇವಸಂಬಂಧಕ್ಕೆ ಒಳಗಾಗಿರಲಿಲ್ಲ. ಯಾವ ಕೃತ್ಯಗಳ ವಿಷಯದಲ್ಲಿ ಈಗ ನೀವು ನಾಚಿಕೆಪಡುತ್ತೀರೋ ಅವುಗಳನ್ನು ನೀವು ಹಿಂದೆ ಮಾಡುತ್ತಾ ಬಂದಿರಿ. ಅವುಗಳಿಃದ ನಿಮಗೆ ದೊರೆತ ಪ್ರತಿಫಲವಾದರೂ ಏನು? ಮೃತ್ಯುವೇ ಅವುಗಳ ಅಂತ್ಯ ಫಲ. ಆದರೆ ನೀವು ಪಾಪದಿಂದ ಬಿಡುಗಡೆ ಹೊಂದಿರುವಿರಿ. ದೇವರಿಗೆ ದಾಸರಾಗಿರುವಿರಿ. ಇದರಿಂದ ನಿಮಗೆ ಸಿಕ್ಕಿರುವ ಪ್ರತಿಫಲ ಪರಿಶುದ್ಧ ಜೀವನ;  ಅಂತಿಮವಾಗಿ ಅಮರ ಜೀವನ, ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ.

ಕೀರ್ತನೆ: 1:1-2, 3, 4, 6
ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆಯುವಾತನು ಧನ್ಯನು

ದುರ್ಜನರ ಆಲೋಚನೆಯಂತೆ ನಡೆಯದೆ|
ಪಾಪಾತ್ಮರ ಪಥದಲಿ ಕಾಲೂರದೆ|
ಧರ್ಮನಿಂದಕರ ಕೂಟದಲಿ ಕೂರದೆ|
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವನಾರೋ ಅವನೇ ಧನ್ಯನು|
ಹಗಲಿರುಳೆನ್ನದೆ ಅದನೇ ಧ್ಯಾನಿಸುತ್ತಿರುವವನಾರೋ ಅವನೇ ಧನ್ಯನು||

ನದಿಯ ಬದಿಯಲೇ ಬೆಳೆದಿಹ ಮರದಂತೆ|
ಸಕಾಲಕೆ ಫಲವೀವ ವೃಕ್ಷದಂತೆ||
ಎಲೆಬಾಡದೆ ಪಸಿರಿರುವ ತರುವಂತೆ|
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ||

ದುರಳರಾದರೋ ತೂರಿ ಹೋಗುವರು|
ಬಿರುಗಾಳಿಗೆ ತರಗೆಲೆಯಾಗುವರು||
ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ|
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ||


ಶುಭಸಂದೇಶ: ಲೂಕ 12:49-53


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: " ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು," ಎಂದರು.

22.10.2025 - "ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು."

  ವಾಚನ: ರೋಮನರಿಗೆ 6:12-18



ಸಹೋದರರೇ, ಆದ್ದರಿಂದ ದೈಹಿಕ ದುರಿಚ್ಛೆಗಳಿಗೆ ದಾಸರಾಗಿ ನೀವು ನಡೆಯದಂತೆ, ನಿಮ್ಮ ನಶ್ವರ ಶರೀರಗಳ ಮೇಲೆ ಪಾಪವು ತನ್ನ ದಬ್ಬಾಳಿಕೆಯನ್ನು ಇನ್ನೆಂದಿಗೂ ನಡೆಸದಿರಲಿ. ನಿಮ್ಮ ದೇಹದ ಯಾವುದೇ ಅಂಗವು ದುಷ್ಕೃತ್ಯವನ್ನೆಸಗುವ ಸಾಧನವಾಗುವಂತೆ ಪಾಪದ ಕಾರ್ಯಕ್ಕೆ ಅದನ್ನು ಒಪ್ಪಿಸದಿರಿ. ಬದಲಾಗಿ ಸತ್ತು ಜೀವಕ್ಕೆ ಬಂದವರಂತೆ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳಿರಿ; ನಿಮ್ಮ ಅಂಗಗಳನ್ನು ಸತ್ಕಾರ್ಯ ಸಾಧನೆಗಳನ್ನಾಗಿ ದೇವರಿಗೆ ಒಪ್ಪಿಸಿಕೊಂಡಿರಿ. ಏಕೆಂದರೆ ಪಾಪವು ಇನ್ನೆಂದಿಗೂ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗದು; ನೀವಿನ್ನು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ದೈವಾನುಗ್ರಹಕ್ಕೆ ಮಾತ್ರ ಅಧೀನರು. ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರಕ್ಕೆ ಅಧೀನರಾಗಿರದೆ ದೈವಾನುಗ್ರಹಕ್ಕೆ ಅಧೀನರಾಗಿರುವ ನಾವು ಪಾಪಮಾಡುತ್ತಲೇ ಜೀವಿಸೋಣವೆ? ಸರ್ವಥಾ ಇಲ್ಲ. ಯಾರ ಕೈ ಕೆಳಗೆ ಗುಲಾಮರಾಗಿರಲು ನಿಮ್ಮನ್ನೇ ಒಪ್ಪಿಸಿಕೊಳ್ಳುತ್ತೀರೋ ಅವರಿಗೆ ನೀವು ಶರಣಾಗುತ್ತೀರಿ. ನೀವು ಪಾಪಕ್ಕೆ ಗುಲಾಮರಾದರೆ ಮರಣವೇ ನಿಮಗೆ ಗತಿ; ದೇವರಿಗೆ ಶರಣಾದರೆ ಸತ್ಸಂಬಂಧವೇ ಅದರ ಸತ್ಪರಿಣಾಮ. ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ. ಏಕೆಂದರೆ, ಹಿಂದೊಮ್ಮೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಕಲಿಸಿದ ಬೋಧನೆಯನ್ನು ನೀವು ಮನಃಪೂರ್ವಕವಾಗಿ ಅಂಗೀಕರಿಸಿ ವಿಧೇಯರಾದಿರಿ; ಪಾಪಬಂಧನದಿಂದ ಬಿಡುಗಡೆ ಹೊಂದಿ ದೇವಸಂಬಂಧಕ್ಕೆ ಒಳಗಾದಿರಿ.

ಕೀರ್ತನೆ: 124:1-3, 4-6, 7-8
ಶ್ಲೋಕ: ನಮಗುದ್ಧಾರ ಪ್ರಭುವಿನ ನಾಮದಲಿ

ಶುಭಸಂದೇಶ: ಲೂಕ 12:39-48

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು," ಎಂದರು. ಆಗ ಪೇತ್ರನು, "ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?"ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು: "ಪ್ರಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. ಆದರೆ ಆ ಸೇವಕನು ತನ್ನಲ್ಲೇ, "ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ", ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು. ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು."

21.10.2025 - "ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ"

 ವಾಚನ: ರೋಮನರಿಗೆ 5:12, 15, 17-19, 20-21


ಸಹೋದರರೇ, ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದು ನಿಜ. ಒಬ್ಬ ಮನುಷ್ಯನ ಅಪರಾಧದ ಕಾರಣ, ಒಬ್ಬ ವ್ಯಕ್ತಿಯ ಮುಖಾಂತರ ಮರಣವು ಎಲ್ಲಾ ಮಾನವರ ಮೇಲೆ ದಬ್ಬಾಳಿಕೆ ನಡೆಸಿತು. ಆದರೆ, ಹೇರಳವಾದ ದೈವಾನುಗ್ರಹವನ್ನೂ ದೇವರೊಡನೆ ಸತ್ಸಂಬಂಧವೆಂಬ ಉಚಿತಾರ್ಥ ವರವನ್ನೂ ಪಡೆದವರಾದರೋ ಯೇಸುಕ್ರಿಸ್ತ ಎಂಬ ಮಹಾತ್ಮನ ಮುಖಾಂತರ ಮತ್ತಷ್ಟು ವಿಪುಲವಾಗಿ ಸಜ್ಜೀವವನ್ನು ಪಡೆದು ರಾಜ್ಯವಾಳುತ್ತಾರೆ. ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ. ಹೇಗೆ ಒಬ್ಬ ಮನುಷ್ಯನ  ವಿಧೇಯತೆಯಿಂದ ಎಲ್ಲರೂ ದೇವರೊಡನೆ ಸತ್ಸಂಬಂಧವನ್ನು  ಹೊಂದುತ್ತಾರೆ. ಅಪರಾಧಗಳು ಹೆಚ್ಚಿದಂತೆ ದೇವರ ಅನುಗ್ರಹವು ಹೆಚ್ಚುಹೆಚ್ಚು ಆಯಿತು. ಹೀಗೆ ಪಾಪವು ಮರಣದ ಮೂಲಕ ಆಳ್ವಿಕೆ ನಡೆಸಿದಂತೆ, ದೈವಾನುಗ್ರಹವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಮ್ಮನ್ನು ದೇವರೊಡನೆ ಸತ್ಸಂಬಂಧದಲ್ಲಿರಿಸಿ, ಅಮರ ಜೀವದತ್ತ ಒಯ್ದು, ಆಳ್ವಿಕೆ ನಡೆಸುತ್ತದೆ.

ಕೀರ್ತನೆ: 40: 7-8, 8-9, 10, 17
ಶ್ಲೋಕ: ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ

ಬೇಡವಾದವು ನಿನಗೆ ಯಜ್ಞಾರ್ಪಣೆ ಬಲಿಕಾಣಿಕೆ|
ಬಯಸಿಲ್ಲ ನೀ ಹೋಮವನೆ, ಪರಿಹಾರಿಕ ಬಲಿಯನೆ|
ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ||

ನಾನೋಗೊಡುತ ಇಂತೆಂದೆ, " ಇಗೋ ನಾನೇ ಬರುತ್ತಿರುವೆ|
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ?||

ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ|
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ||

ನಿನ್ನನ್ನು ಅರಸುವವರೆಲ್ಲರು ಹರ್ಷಾನಂದಗೊಳ್ಳಲಿ|
ನಿನ್ನ ರಕ್ಷಣಾಪ್ರಿಯರು ಸತತ ' ಪ್ರಭು ಪರಾಕ್ರಮಿ ' ಎನ್ನಲಿ||

ಶುಭಸಂದೇಶ: ಲೂಕ 12:35-38


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧವಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು, ಏಕೆಂದರೆ, ಯಜಮಾನನೇ ನಡುಕಟ್ಟಿನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಯಜಮಾನನು ಬರುವಾಗ ನಡು ರಾತ್ರಿಯಾಗಿರಲಿ, ಮುಂಜಾವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು."

20.10.2025 - 'ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ದಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?'

 ಪೌಲನು  ರೋಮನರಿಗೆ  ಬರೆದ  ಪತ್ರದಿಂದ  ವಾಚನ  4:20-24

ಸಹೋದರರೇ,  ದೇವರ  ವಾಗ್ದಾನದಲ್ಲಿ  ಅಬ್ರಹಾಮನು  ಸಂಶಯಪಡಲಿಲ್ಲ.  ಅಪನಂಬಿಕೆಯಿಂದ  ಚಂಚಲಚಿತ್ತನಾಗಲೂ  ಇಲ್ಲ.  ಬದಲಾಗಿ  ಆತನ  ವಿಶ್ವಾಸ  ವೃದ್ಧಿಯಾಯಿತು.  ಆತನು  ದೇವರನ್ನು  ಹೊಗಳಿ  ಕೊಂಡಾಡಿದನು.  ದೇವರು  ತಾವು  ವಾಗ್ದಾನಮಾಡಿದ್ದನ್ನು  ಖಂಡಿತವಾಗಿಯೂ  ನೆರವೇರಿಸಬಲ್ಲರೆಂದು  ದೃಢವಾಗಿ  ನಂಬಿದನು.  ಆದ್ದರಿಂದಲೇ,  " ದೇವರು  ಆತನನ್ನು  ತಮ್ಮೊಂದಿಗೆ  ಸತ್ಸಂಬಂಧದಲ್ಲಿ  ಇರುವುದಾಗಿ  ಪರಿಗಣಿಸಿದರು, " ಎಂದು  ಲಿಖಿತವಾಗಿದೆ.  ' ಸತ್ಸಂಬಂಧದಲ್ಲಿ  ಇರುವುದಾಗಿ  ಪರಿಗಣಿಸಿದರು'  ಎಂಬ  ಮಾತು  ಆತನಿಗೆ  ಮಾತ್ರವಲ್ಲ,  ನಮಗೂ  ಅನ್ವಯಿಸುತ್ತದೆ.  ನಮ್ಮ  ಪ್ರಭುವಾದ  ಯೇಸುವನ್ನು  ಮರಣದಿಂದ  ಎಬ್ಬಿಸಿದ  ದೇವರನ್ನು  ವಿಶ್ವಾಸಿಸುವ  ನಾವು  ಸಹ  ಅವರೊಂದಿಗೆ  ಸತ್ಸಂಬಂಧದಲ್ಲಿ  ಇರುವುದಾಗಿ  ಪರಿಗಣಿತರಾಗುತ್ತೇವೆ.  ನಮ್ಮ  ಪಾಪಗಳ  ನಿಮಿತ್ತ  ಯೇಸುವನ್ನು  ಮರಣಕ್ಕೆ  ಗುರಿಪಡಿಸಲಾಯಿತು.  ನಮ್ಮನ್ನು  ದೇವರೊಡನೆ  ಸತ್ಸಂಬಂಧದಲ್ಲಿ  ಇರಿಸುವುದಕ್ಕಾಗಿ  ಅವರು  ಪುನರುತ್ಥಾನ  ಹೊಂದಿದರು.

- ಪ್ರಭುವಿನ  ವಾಕ್ಯ

ಕೀರ್ತನೆ:          ಲೂಕ 1:69-75.V.68

ಶ್ಲೋಕ:  ಸ್ತುತಿಸ್ತೋತ್ರ  ಇಸ್ರಯೇಲಿನ  ದೇವರಾದ  ಸರ್ವೇಶ್ವರನಿಗೆ |

1.  ಉದಯಗೊಳಿಸಿರುವನಾತ  ತನ್ನ  ದಾಸ  ದಾವೀದನ  ವಂಶದೊಳು|

ನಮಗೊಬ್ಬ  ಶಕ್ತಿಯುತ  ಮುಕ್ತಿದಾತನನು||

ಪುರಾತನ  ಕಾಲದಿಂದಲೇ,  ಪೂಜ್ಯ  ಪ್ರವಾದಿಗಳ  ಬಾಯಿಂದಲೇ|

ಅರುಹಿಸಿರುವನು  ಇಂತೆಂದು  ನಮಗೆ||

 

2.  ಹಗೆಗಳಿಂದ,  ದ್ವೇಷಿಗಳೆಲ್ಲರ  ಹಿಡಿತದಿಂದ|

ನಿಮಗೆ  ಅನುಗ್ರಹಿಸುವೆನು  ಸಂರಕ್ಷಣೆ||

ವ್ಯಕ್ತಪಡಿಸಿರುವನು  ಪೂರ್ವಜರಿಗೆ  ಪ್ರಮಾಣಿಸಿದ  ಪ್ರೀತಿಯನು|

ಸ್ಮರಿಸಿಕೊಂಡಿರುವನು  ತನ್ನ  ಪವಿತ್ರ  ಒಡಂಬಡಿಕೆಯನು||

 

3.  ಪಿತಾಮಹ  ಅಬ್ರಹಾಮನಿಗಿತ್ತ  ಮಾತಿಗನುಸಾರ|

ನಮಗಿತ್ತಿರುವದು  ಶತ್ರುಗಳಿಂದ  ರಕ್ಷಿಸುವೆನೆಂಬ  ಅಭಯ||

ಘೋಷಣೆ:                    ಲೂಕ 8:15

ಅಲ್ಲೆಲೂಯಅಲ್ಲೆಲೂಯ!

ದೇವರ  ವಾಕ್ಯವನ್ನು  ಕೇಳಿ  ಅದನ್ನು  ಸದ್ಗುಣ  ಹಾಗೂ  ಸಾತ್ವಿಕವಾದ  ಹೃದಯದಲ್ಲಿಟ್ಟು | ಸಹನೆಯಿಂದ  ಫಲತರುವವರು  ಧನ್ಯರು ||

ಅಲ್ಲೆಲೂಯ!

ಶುಭಸಂದೇಶ  : ಲೂಕನು  ಬರೆದ  ಪವಿತ್ರ ಶುಭಸಂದೇಶದಿಂದ ವಾಚನ 12:13-21

ಆ  ಕಾಲದಲ್ಲಿ  ಜನಸಮೂಹದಿಂದ  ಒಬ್ಬನು,  "ಬೋಧಕರೇ,  ನಮ್ಮ  ಪಿತ್ರಾರ್ಜಿತ  ಸೊತ್ತನ್ನು  ನನಗೆ  ಭಾಗಮಾಡಿ  ಕೊಡುವಂತೆ  ನನ್ನ    ಸೋದರನಿಗೆ  ಹೇಳಿ, " ಎಂದು  ಕೇಳಿಕೊಂಡನು.  ಅದಕ್ಕೆ  ಯೇಸು,  " ಏನಯ್ಯಾ,  ನಿಮ್ಮಿಬ್ಬರ  ನ್ಯಾಯ  ತೀರಿಸುವುದಕ್ಕೂ  ನಿಮ್ಮ  ಸ್ವತ್ತನ್ನು  ಭಾಗಮಾಡಿಕೊಡುವುದಕ್ಕೂ  ನನ್ನನ್ನು  ನೇಮಿಸಿದವರು. ಯಾರು? " ಎಂದು  ಮರುಪ್ರಶ್ನೆ   ಹಾಕಿದರು.  ಅನಂತರ  ಜನರನ್ನುದ್ದೇಶಿಸಿ, "ಎಚ್ಚರಿಕೆ,  ಯಾವ  ವಿಧವಾದ  ಲೋಭಕ್ಕೂ  ಒಳಗಾಗದಂತೆ  ಜಾಗರೂಕರಾಗಿರಿ.  ಏಕೆಂದರೆ,  ಒಬ್ಬನಿಗೆ  ಎಷ್ಟೇ  ಸಿರಿಸಂಪತ್ತಿರಲಿ,  ಅವನ  ನಿಜವಾದ  ಜೀವನ  ಅದನ್ನು  ಅವಲಂಬಿಸಿಲ್ಲ, " ಎಂದು  ಹೇಳಿದರು.  ಅನಂತರ  ಅವರಿಗೆ  ಈ  ಸಾಮತಿಯನ್ನು  ಹೇಳಿದರು:  " ಒಬ್ಬ  ಧನಿಕನಿದ್ದ,  ಅವನ  ಭೂಮಿ  ಒಮ್ಮೆ  ಸಮೃದ್ದಿಯಾದ  ಬೆಳೆಕೊಟ್ಟಿತು.  ಆಗ  ಅವನು,  'ನನ್ನ  ಬೆಳೆಯನ್ನೆಲ್ಲಾ  ತುಂಬಿಡಲು  ಸ್ಥಳವಿಲ್ಲವಲ್ಲಾ,  ಏನು  ಮಾಡಲಿ ? 'ಎಂದು  ತನ್ನಲ್ಲೇ  ಆಲೋಚಿಸುತ್ತಾ,  ' ಹೌದು,  ಹೀಗೆ  ಮಾಡುತ್ತೇನೆ :   ಇರುವ  ಕಣಜಗಳನ್ನು  ಕಿತ್ತುಹಾಕಿಸಿ,  ಇನ್ನೂ  ದೊಡ್ಡವುಗಳನ್ನು  ಕಟ್ಟಿಸುತ್ತೇನೆ.  ಅಲ್ಲಿ  ನನ್ನ  ಎಲ್ಲಾ  ದವಸಧಾನ್ಯಗಳನ್ನು  ಸರಕು  ಸಾಮಾಗ್ರಿಗಳನ್ನೂ  ತುಂಬಿಸಿಡುತ್ತೇನೆ.  ಅಲ್ಲದೆ,  "ಎಲೈ  ಮನವೇ,  ಅನೇಕ  ವರ್ಷಗಳಿಗೆ  ಬೇಕಾದಷ್ಟು  ಸರಕು  ಬಿದ್ದಿದೆ;  ಆರಾಮವಾಗಿರು.  ತಿನ್ನು,  ಕುಡಿ,  ಸುಖಪಡು " ಎಂದು  ಹೇಳಿಕೊಳ್ಳುತ್ತೇನೆ, ' ಎಂದುಕೊಂಡ.  ಆಗ  ದೇವರು,  'ಎಲವೋ  ಮೂರ್ಖ,  ಇದೇ  ರಾತ್ರಿ  ನೀನು  ಸಾಯಬೇಕಾಗಿದೆ,  ನಿನಗಾಗಿ  ಸಿದ್ದಮಾಡಿಟ್ಟಿರುವುದೆಲ್ಲ  ಯಾರ  ಪಾಲಾಗುವುದು?  ' ಎಂದರು.  ತನಗೋಸ್ಕರ  ಸಂಪತ್ತನ್ನು  ಶೇಖರಿಸಿಟ್ಟುಕೊಂಡು  ದೇವರ  ದೃಷ್ಟಿಯಲ್ಲಿ  ಧನಿಕನಲ್ಲದವನು  ಇವನಿಗೆ  ಸಮಾನನು, " ಎಂದರು  ಯೇಸು. 

-ಪ್ರಭುಕ್ರಿಸ್ತರ ಶುಭಸಂದೇಶ

19.10.2025

 ಮೊದಲನೇ ವಾಚನ: ವಿಮೋಚನಕಾಂಡ 17:8-13


ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಯೇಲರ ಮೇಲೆ ಯುದ್ಧ ಮಾಡುವುದಕ್ಕೆ ಬಂದರು. ಮೋಶೆ ಯೆಹೋಶುವನಿಗೆ, "ನೀನು ಯೋಧರನ್ನು ಆರಿಸಿಕೊಂಡು ನಾಳೆ ನಮ್ಮ ಪರವಾಗಿ ಹೊರಟು ಅಮಾಲೇಕ್ಯರೊಡನೆ ಯುದ್ಧಮಾಡು. ನಾನು ದೇವರ ದಂಡವನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು," ಎಂದು ಹೇಳಿದನು. ಮೋಶೆಯ ಅಪ್ಪಣೆಯ ಮೇರೆಗೆ ಯೆಹೋಶುವನು ಅಮಾಲೇಕ್ಯರ ಸಂಗಡ ಯುದ್ಧಮಾಡಲು ಹೊರಟನು. ಮೋಶೆ, ಆರೋನ ಹಾಗೂ ಹೂರ ಈ ಮೂವರು ಗುಡ್ಡದ ತುದಿಗೆ ಏರಿದರು. ಮೋಶೆ ತನ್ನ ಕೈಗಳನ್ನು ಮೇಲಕ್ಕೆ ಎತ್ತಿರುವಾಗಲೆಲ್ಲಾ ಇಸ್ರಯೇಲರು ಜಯಶೀಲರಾಗುತ್ತಿದ್ದರು, ಇಳಿಸುವಾಗಲೆಲ್ಲ ಅಮಾಲೇಕ್ಯರು ಜಯಶೀಲರಾಗುತ್ತಿದ್ದರು. ಹೀಗಿರಲು ಮೋಶೆಯ ಕೈಗಳು ಆಯಾಸಗೊಳ್ಳುತ್ತಿದ್ದುದರಿಂದ ಆರೋನ ಮತ್ತು ಹೂರನು ಒಂದು ಕಲ್ಲನ್ನು ತಂದಿಟ್ಟು, ಅದರ ಮೇಲೆ ಮೋಶೆಯನ್ನು ಕುಳ್ಳರಿಸಿದರು. ಅಲ್ಲದೆ ಬಲಗಡೆ ಒಬ್ಬನು ಎಡಗಡೆ ಒಬ್ಬನು ನಿಂತು ಅವನ ಕೈಗಳಿಗೆ ಆಧಾರಕೊಟ್ಟರು. ಈ ರೀತಿಯಾಗಿ ಅವನ ಕೈಗಳು ಹೊತ್ತು ಮುಳುಗುವ ತನಕ ಇಳಿಯದೆ ನಿಂತೇ ಇರುವಂತೆ ಮಾಡಿದರು. ಹೀಗೆ ಯೆಹೋಶುವನು ಅಮಾಲೇಕ್ಯರ ಯೋಧರನ್ನು ಕತ್ತಿಗೆ ತುತ್ತಾಗಿಸಿ ಅವರನ್ನು ಸೋಲಿಸಿದನು.

ಕೀರ್ತನೆ: 121:1-2, 3-4, 5-6, 7-8
ಶ್ಲೋಕ: ನನಗೆ ಒತ್ತಾಸೆ ಪ್ರಭುವಿನಿಂದ; ಭೂಮ್ಯಾಕಾಶ ಸೃಜಿಸಿದವನಿಂದ

ಎರಡನೇ ವಾಚನ: 2 ತಿಮೊಥೇಯನಿಗೆ  3:14-4:2

ಅತಿ ಪ್ರಿಯನೇ, ನೀನಾದರೋ ನನಗೆ ಬೊಧಿಸಲಾಗಿರುವ ಹಾಗೂ ನೀನು ದೃಡವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು. ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯ ಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ. ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧನೆಗೂ ಉಪಯುಕ್ತವಾಗಿದೆ. ಅದರ ಮೂಲಕ ದೈವಭಕಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು. ದೇವರ ಸಮಕ್ಷಮದಲ್ಲಿ, ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರ್ಪನ್ನು ಕೊಡಲು ಬರುವ ಕ್ರಿಸ್ತ ಯೇಸುವಿನ ಸಮಕ್ಷಮದಲ್ಲಿ, ನಾನು ಅವರ ಪ್ರತ್ಯಕ್ಷತೆಯನ್ನೂ ಸಾಮ್ರಾಜ್ಯವನ್ನೂ ಮುಂದಿಟ್ಟು ನಿನಗೆ  ಆಜ್ಞಾಪಿಸುವುದೇನೆಂದರೆ: ನೀನು ದೇವರ ವಾಕ್ಯವನ್ನು ಆಸಕ್ತಿಯಿಂದ ಕಾಲ ಅಕಾಲಗಳನ್ನು ಲೆಕ್ಕಿಸದೆ ಬೋಧಿಸು. ಸತ್ಯವನ್ನು ಮನಗಾಣಿಸು; ತಪ್ಪನ್ನು ತಿದ್ದು; ಒಳ್ಳೆಯದನ್ನು ಪ್ರೋತ್ಸಾಹಿಸು; ತಾಳ್ಮೆಯನ್ನು ಕಳೆದುಕೊಳ್ಳದೆ ಉಪದೇಶಮಾಡು.

ಶುಭಸಂದೇಶ: ಲೂಕ 18:1-8

ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಒಂದು ನಗರದಲ್ಲಿ ಒಬ್ಬ ನ್ನಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ನನ್ನ ವಿರೋಧಿ ಅನ್ನಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ," ಎಂದು ಕೇಳಿಕೊಳ್ಳುತ್ತಿದ್ದಳು. ಬಹುಕಾಲ ನ್ನಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, "ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,", ಎಂದುಕೊಂಡ." ಆನಂತರ ಪ್ರಭು ಯೇಸು, "ಈ ನೀತಿಕೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ? ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯತೀರಿಸದೆ ಹೋಗುವರೆ? ತಡಮಾಡಿಯಾರೆ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?" ಎಂದರು.

18.10.2025 - ಸಂತ ಸ್ಮರಣೆ - ಸಂತ ಲೂಕ - St. Luke



ಹೊಸ ಒಡಂಬಡಿಕೆಯ  ಬಹುದೊಡ್ಡ ಭಾಗವನ್ನು ಬರೆದವನು ಸಂತ ಲೂಕ. "ನಮ್ಮ ಪ್ರಿಯ ವೈದ್ಯನಾದ ಲೂಕ ಎಂಬ ಸಂತ ಪೌಲನ ಮಾತಿನ ಮೂಲಕ ಲೂಕನ ಪರಿಚಯವಾಗುತ್ತದೆ.

(ಕೊಲೊಸ್ಸೆ 04:14). ಲೂಕ ಗ್ರೀಕ್ ಮೂಲದವ, ಅನ್ಯಮತಸ್ಥನಾಗಿದ್ದ ಎನ್ನಲಾಗಿದೆ. ಅಂತಿಯೋಕ್ಯ ಅವನ ಜನ್ಮಸ್ಥಳ ಎಂದೂ ಹೇಳಲಾಗಿದೆ.  ಸಂತ ಪೌಲ ತನ್ನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಈ ವೈದ್ಯನನ್ನು ಬೇಟಿಯಾದ. ಈ ಬೇಟಿಯ ನಂತರ  ಲೂಕನನ್ನು 51ರಲ್ಲಿ ಟ್ರೊವಾಸ್ ಎಂಬ ಸ್ಥಳದಲ್ಲಿ ಕ್ರೈಸ್ತಧರ್ಮಕ್ಕೆ ಮಾನಸಾಂತ ರಿಸಿದ ಎಂಬ ನಂಬಿಕೆಯಿದೆ.

ಪ್ರೇಷಿತರ ಕಾರ್ಯಕಲಾಪಗಳಲ್ಲಿ ಉಲ್ಲೇಖವಾಗಿರುವ ಪೌಲನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಲೂಕನು ಅವನನ್ನು ಭೇಟಿಯಾಗಿ ಅವರೊಂದಿಗೆ ಫಿಲಿಪ್ಪಿಯಲ್ಲಿ ಕೆಲವು ವರ್ಷ ಇರುತ್ತಾನೆ. ಪೌಲ ಮೂರನೇ ಧರ್ಮಪ್ರಸಾರ ಪ್ರಯಾಣ ಆರಂಭಿಸಿದಾಗ ಅವರೊಂದಿಗೆ ಜೆರುಸಲೇಮಿಗೆ ಬಂದು ಸೆಜರೀಯದಲ್ಲಿ ಪೌಲ್ ಬಂಧನ ಕ್ಕೊಳಗಾದಾಗ ಅವನೊಂದಿಗೆ ಇರುತ್ತಾನೆ. ಈ ಎರಡು ವರ್ಷಗಳ ಕಾಲದಲ್ಲಿ, ಯೇಸುವನ್ನು ಕಂಡಿದ್ದ, ಅವರೊಂದಿಗೆ ಒಡನಾಡಿದ್ದ ಜನರನ್ನು ಕಂಡು, ಅವರನ್ನು ಸಂದರ್ಶಿಸಿ ಏಸುವಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿರಬೇಕು. ಪೌಲ್ ರೋಮ್ ಗೆ ಬೆಳೆಸಿದ ಅಪಾಯಕಾರಿ ಪ್ರಯಾಣದಲ್ಲೂ ಲೂಕ ಅವನೊಂದಿಗೆ ಇರುತ್ತಾನೆ. ಕ್ರಿ.ಶ. 61 ರಲ್ಲಿ ಪೌಲ ರೋಮ್ನಲ್ಲಿ ಬಂಧಿತನಾದಾಗಲೂ ಎಲ್ಲರೂ ಪೌಲನನ್ನು ತೊರೆದಾಗ ಲೂಕ ಮಾತ್ರ ಅವನನ್ನು ಬಿಟ್ಟು ಹೋಗುವುದಿಲ್ಲ. "ಲೂಕ ಮಾತ್ರ ನನ್ನ ಜೊತೆಯಿದ್ದಾನೆ ಎಂದು ಪೌಲನೇ ಹೇಳುತ್ತಾನೆ" ಎಂದು ಪೌಲನೇ ಹೇಳುತ್ತಾನೆ. (2ತಿಮೋಥಿ4:11).

 ಲೂಕ ಅನ್ಯಮತಸ್ಥನಾಗಿದ್ದರಿಂದಲೋ ಏನೋ ಅನ್ಯಜನರೊಂದಿಗೆ ದುಡಿದು ಪೌಲನನ್ನು ಸೇರಿಕೊಂಡಿರಬೇಕು. ತನ್ನ ಶುಭಸಂದೇಶವನ್ನು ಅನ್ಯಜನರಿಗೆ ಗ್ರೀಕ್ ಭಾಷೆಯಲ್ಲಿ ಉತ್ತಮ ಶೈಲಿ ಮತ್ತು ನಾಜೂಕಾದ ರೀತಿಯಲ್ಲಿ ಬರೆಯುತ್ತಾರೆ. ಈತ ಪೌಲನಿಂದ ಎಷ್ಟು ಪ್ರಭಾವಗೊಂಡಿದ್ದ ಎಂದರೆ ಸಂತ ಜೆರೋಂ ಮತ್ತು ಜಾನ್ ಕ್ರಿಸಾಸ್ಟಮ್ ಲೂಕನ ಶುಭ ಸಂದೇಶವನ್ನು 'ಸಂತ ಪೌಲರ ಶುಭ ಸಂದೇಶ' ಎಂದು ಕರೆಯುತ್ತಾರೆ.

ಲೂಕ ಶುಭ ಸಂದೇಶ ಬರೆಯುವಷ್ಟರಲ್ಲಿ ಮತ್ತಾಯ ಮತ್ತು ಮಾರ್ಕನ ಶುಭಸಂದೇಶ ಈಗಾಗಲೇ ಚಾಲ್ತಿಯಲ್ಲಿತ್ತು. ಹಲವು ಜನರ ಅನುಭವ, ಮಾತೆ ಮೇರಿಯದೇ ಅನುಭವ ಈ ಶುಭಸಂದೇಶದಲ್ಲಿದೆ ಎನ್ನಲಾಗಿದೆ. ಸಂತ ಲೂಕ ಮಾತೆ ಮೇರಿಯ ಭಾವಚಿತ್ರ ಚಿತ್ರಸಿದ್ದ ಎಂಬ ಪ್ರತೀತಿಯೂ ಇದೆ. ಲೂಕನ ಈ ವಿಶಿಷ್ಟ ಬರವಣಿಗೆ ಮತ್ತು ಅನುಭವವನ್ನು ಅವನ ಶುಭಸಂದೇಶದಲ್ಲಿಯೇ ಕಾಣಬಹುದು‌.

ಲೂಕನ ಶುಭ ಸಂದೇಶದಲ್ಲಿ ಹೆಚ್ಚುವರಿಯಾಗಿ ಆರು ಪವಾಡಗಳು ಮತ್ತು 15 ಸಾಮತಿಗಳ ಉಲ್ಲೇಖವಿದೆ. ಬಡವರು ಮತ್ತು ಸಾಮಾಜಿಕ ಕಾಳಜಿ ಯಿರುವ ಲೂಕನಲ್ಲಿ ಲಾಜರ್ ಮತ್ತು ಶ್ರೀಮಂತನ ಕಥೆ ಬರುತ್ತದೆ. ದೇವ ಮಾತೆಯ ಸಾಮಾಜಿಕ ನ್ಯಾಯದ 'ಸ್ತುತಿಗೀತೆ' ಬರುತ್ತದೆ. ಲೂಕ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇದ್ದುದ್ದರಿಂದ ಮಾತೆಮೇರಿ,ಎಲಿಜಬೆತ್

ಇವರ ಉಲ್ಲೇಖವಿದೆ. 'ನಮೋ ಮರಿಯಾ ವರಪ್ರಸಾದ ಪೂರ್ಣೆ' ಎಂಬ ಘೋಷಣೆ ಇದೆ. ದೇವರ ಕ್ಷಮೆ ಮತ್ತು ಪ್ರೀತಿಯ ಬಗ್ಗೆ ಲೂಕನದು ಅಪಾರ ನಂಬಿಕೆ. ಇಲ್ಲಿ ದುಂದುಗಾರ ಮಗನ ಬಗ್ಗೆ ಬರುತ್ತದೆ. ಸಿಮೋನ್ ಮನೆಯಲ್ಲಿ ಯೇಸುವಿನ ಪಾದ ಅಂಭ್ಯಂಜಿಸಿದ ಮಹಿಳೆಯ ಬಗ್ಗೆ ಬರೆಯುತ್ತಾರೆ.

 ಲೂಕನ ಮರಣದ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಇಲ್ಲ. ಪೌಲನು ಸಾವಿನ ನಂತರ ಲೂಕ ಏನು ಮಾಡಿದ, ಎಲ್ಲಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆಲವು ಬರಹಗಾರರು, ಲೂಕ  ಕೂಡ ರಕ್ತಸಾಕ್ಷಿಯಾದ ಎಂದರೆ, ಇನ್ನೂ ಕೆಲವರು ಆತ ಗ್ರೀಸ್ ನಲ್ಲಿ ಗಾ ಪ್ರದೇಶದಲ್ಲಿ ಬೋಧಿಸಿದ ಎನ್ನುತ್ತಾರೆ. ಮೊದಲ ಪರಂಪರೆಯ ಪ್ರಕಾರ ಲೂಕ ಗ್ರೀಸ್ ನಲ್ಲಿದ್ದು ತನ್ನ ಶುಭಸಂದೇಶ ಬರೆದ ನಂತರ 84ರಲ್ಲಿ ತೀರಿಕೊಂಡ. ಇನ್ನೊಂದು ಪರಂಪರೆಯ ಪ್ರಕಾರ ಲೂಕ ಡಾಲ್ ಮೇಷಿಯಾದಲ್ಲಿ (ಯುಗೋಸ್ಲಾವಿಯಾ) ಬೋಧನೆ ಮಾಡಿದ ನಂತರ ಗ್ರೀಸ್ನಲ್ಲಿ ರಕ್ತ ಸಾಕ್ಷಿಯಾದ. ಅವನ ಅವಶೇಷಗಳನ್ನು 360ರಲ್ಲಿ ಕಾನ್ಸ್ಟಾಂಟಿನೋಪಲ್ ಗೆ ತರಲಾಯಿತು.

 ಲೂಕನ ಚಿತ್ರ ಒಂದು ಎತ್ತು ಮತ್ತು ಕರುವಿನ ಜೊತೆಗೂಡಿ ಇರುತ್ತದೆ. ಕ್ರಿಸ್ತ ಬಲಿಯರ್ಪಣೆಯಾದ ಸಂಕೇತವಿದು. ಲೂಕ ವೈದ್ಯರುಗಳ ಪಾಲಕ.

17.10.2025 - " ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ."

 ವಾಚನ: ರೋಮನರಿಗೆ 4:1-8


ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರೆ ಆಗ ಹೊಗಳಿಕೊಳ್ಳುವುದಕ್ಕೆ ಆತನಿಗೆ ಆಸ್ಪದವಿರುತ್ತಿತ್ತು, ಆದರೆ ಅದು ದೇವರ ಸಾನ್ನಿಧ್ಯದಲ್ಲಿ ಅಲ್ಲ. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಹೀಗೆ ಹೇಳಿದೆ: " ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು, ಆತನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ದೇವರು ಪರಿಗಣಿಸಿದರು." ದುಡಿಯುವವನಿಗೆ ದೊರಕುವ ಕೂಲಿ ಉಚಿತ ದಾನವಲ್ಲ, ಅದು ಕಷ್ಟಾರ್ಜಿತ ಸಂಪಾದನೆ. ಆದರೆ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರೂ ಅಧರ್ಮಿಗಳನ್ನು ಸದ್ಧರ್ಮಿಗಳನ್ನಾಗಿಸುವ ದೇವರಲ್ಲಿ ವಿಶ್ವಾಸವಿಡುತ್ತಾರೋ ಅಂಥವರ ವಿಶ್ವಾಸವನ್ನು ದೇವರು ಅಂಗೀಕರಿಸಿ, ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ. ಅಂತೆಯೇ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರು ದೇವರೊಡನೆ ಸತ್ಸಂಬಂಧದಲ್ಲಿ ಇರುತ್ತಾರೋ ಅಂಥವರು ಭಾಗ್ಯವಂತರು ! ಇದನ್ನು ಕುರಿತು ದಾವೀದನು ಹೀಗೆನ್ನುತ್ತಾನೆ: " ಯಾರ ಅಪರಾಧಗಳು ಪರಿಹರಿಸಲಾಗಿವೆಯೋ, ಯಾರ ಪಾಪಗಳು ಕ್ಷಮಿಸಲಾಗಿವೆಯೋ ಅವರು ಭಾಗ್ಯವಂತರು ! ಯಾರ ಪಾಪವನ್ನು ಸರ್ವೇಶ್ವರ ಲೆಕ್ಕಿಸುವುದಿಲ್ಲವೋ ಆತನು ಭಾಗ್ಯವಂತನು!"

ಕೀರ್ತನೆ 32:1-2, 5, 11
ಶ್ಲೋಕ: ನೀನೇ ನನಗೆ ಮರೆಯು, ಆಪತ್ತಿನಲಾಸರೆಯು.

ಯಾರ ಪಾಪ ಪರಿಹಾರವಾಗಿದೆಯೋ|
ಯಾರ ದ್ರೋಹ ವಿಮೋಚನೆಯಾಗಿದೆಯೋ ಅವರೇ ಧನ್ಯರು||
ಯಾರಪರಾಧವನು ಪ್ರಭು ಎಣಿಸಿಲ್ಲವೋ|
ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು||

ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು|
ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು||
ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ ಎಂದೆನು|
ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು||

ಸಜ್ಜನರೇ, ಸಂತೋಷಿಸಿರಿ, ಉಲ್ಲಾಸಿಸಿರಿ ಪ್ರಭುವಿನಲಿ|
ಯಥಾರ್ಥಚಿತರೇ, ಜಯಕಾರಮಾಡಿ ಆತನ ವಿಷಯದಲಿ||

ಶುಭಸಂದೇಶ: ಲೂಕ 12:1-7


ಆ ಕಾಲದಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, " ಫರಿಸಾಯರ ಹುಳಿಹಿಟ್ಟಿನ ಬಗ್ಗೆ, ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ. ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟಬಯಲಾಗುವುದು, ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು. ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು, ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು. ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ : ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ : ಸತ್ತ ಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿ ಹೇಳುತ್ತೇನೆ. ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ, ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು, " ಎಂದರು.

16.10.2025 - "ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ"

  ವಾಚನ: ರೋಮನರಿಗೆ 3:21-30

ಸಹೋದರರೇ, ಈಗಲಾದರೋ ಧರ್ಮಶಾಸ್ತ್ರದ ನೆರವಿಲ್ಲದೆಯೇ ದೇವರಿಂದ ದೊರಕುವ ಸತ್ಸಂಬಂಧವು ಪ್ರಕಟವಾಗಿದೆ. ಇದಕ್ಕೆ ಧರ್ಮಶಾಸ್ತ್ರವೂ ಪ್ರವಾದನಾಗ್ರಂಥವೂ ಸಾಕ್ಷಿಯಾಗಿವೆ. ಯೇಸುಕ್ರಿಸ್ತರಲ್ಲಿ ವಿಶ್ವಾಸವಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರನ್ನೂ ದೇವರು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ. ಮಾನವರೆಲ್ಲರೂ ಪಾಪಿಗಳೇ, ಎಲ್ಲರೂ ದೇವದತ್ತ ಮಹಿಮೆಯನ್ನು ಕಳೆದುಕೊಂಡವರೇ. ಆದರೆ ದೇವರು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಪಾಪವಿಮೋಚನೆಯನ್ನು ದಯಪಾಲಿಸಿ, ತಮ್ಮ ಉಚಿತಾರ್ಥ ಅನುಗ್ರಹದಿಂದ ಅವರನ್ನು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಪೂರ್ವಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ವಿಶ್ವಾಸವುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತರು ರಕ್ತಧಾರೆ ಎರೆಯುವಂತೆ ಮಾಡಿದರು. ತಾವು ನೀತಿಸ್ವರೂಪರೆಂದು ತೋರಿಸುವುದಕ್ಕಾಗಿ ಹೀಗೆ ಮಾಡಿದರು. ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯೂ ತಾವು ಸತ್ಯಸ್ವರೂಪರು ಮತ್ತು ನ್ಯಾಯವಂತರು ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಈ ರೀತಿ ಮಾಡಿದರು. ಹೀಗಿರುವಲ್ಲಿ ಮಾನವನು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವಿದೆಯೇ? ಇಲ್ಲವೇ ಇಲ್ಲ. ಹಾಗಾದರೆ ಸತ್ಸಂಬಂಧಕ್ಕೆ ಆಧಾರವೇನು? ಸತ್ಕಾರ್ಯಗಳ  ಸಾಧನೆಯೇ? ಇಲ್ಲ. ವಿಶ್ವಾಸವೇ? ಹೌದು. ಮಾನವರಿಗೆ ದೇವರೊಡನೆ ಸತ್ಸಂಬಂಧ ದೊರಕುವುದು ಧರ್ಮಶಾಸ್ತ್ರಗಳ ನೇಮನಿಯಮಗಳನ್ನು ಪಾಲಿಸುವುದರಿಂದ ಅಲ್ಲ, ವಿಶ್ವಾಸದಿಂದಲೇ ಎಂಬುದು ನಮ್ಮ ಸಿದ್ಧಾಂತ. ದೇವರು ಕೇವಲ ಯೆಹೂದ್ಯರಿಗೆ ಮಾತ್ರ ದೇವರೋ ಅಥವಾ ಇತರರಿಗೂ ದೇವರೋ? ಹೌದು, ಇತರರಿಗೂ ದೇವರೆ. ಯೆಹೂದ್ಯರನ್ನು ಅವರ ವಿಶ್ವಾಸದ ಆಧಾರದ ಮೇಲೂ ಇತರರನ್ನು ಅವರ ವಿಶ್ವಾಸದ ಮೂಲಕವೂ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವ ದೇವರು ಒಬ್ಬರೇ.

ಕೀರ್ತನೆ: 130: 1-2, 3-4, 5-6
ಶ್ಲೋಕ: ಪ್ರಭುವಿನಲ್ಲಿದೆ ಕರುಣೆ, ಪೂರ್ಣ ವಿಮೋಚನೆ

ಶುಭಸಂದೇಶ: ಲೂಕ 11:47-54

ಯೇಸು ಧರ್ಮಶಾಸ್ತ್ರಜ್ಞರನ್ನುದ್ದೇಶಿಸಿ ಹೀಗೆಂದರು. "ಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದು ಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ. ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು. ಈ ಕಾರಣದಿಂದಲೇ ದೇವರ ಜ್ಞಾನವು ಹೇಳುವುದೇನೆಂದರೆ - ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆಮಾಡುವರು: ಕೆಲವರನ್ನು ಚಿತ್ರಹಿಂಸೆ ಪಡಿಸುವರು. ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು. ಹೌದು, ಈ ಪೀಳಿಗೆಯವರೇ ಲೆಕ್ಕಕೊಡ ಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ,  ಎಂದರು. ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ, ಅವರ ಮಾತಿನಲ್ಲಿ ಏನಾದರು ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.

15.10.2025 - ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ,

  ವಾಚನ: ರೋಮನರಿಗೆ 2:1-11

ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪು ನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪು ಮಾಡಿಕೊಂಡ ಹಾಗಾಯಿತು. ಇಂಥ ಅಪರಾಧಗಳನ್ನು ಮಾಡುವವರ ಬಗ್ಗೆ ದೇವರು ನೀಡುವ ತೀರ್ಪು ನ್ಯಾಯಬದ್ಧವಾದುದು ಎಂಬುದನ್ನು ನಾವು ಬಲ್ಲೆವು. ಹೀಗಿರುವಾಗ, ಇತರರಿಗೆ ಯಾವ ಅಪರಾಧಕ್ಕಾಗಿ ತೀರ್ಪುನೀಡಿದೆಯೋ ಅಂಥ ಅಪರಾಧವನ್ನೇ ನೀನೂ ಮಾಡುತ್ತಿರುವೆಯಲ್ಲಾ! ದೇವರು ಕೊಡುವ ನ್ಯಾಯತೀರ್ಪಿನಿಂದ ನೀನು ಮಾತ್ರ ತಪ್ಪಿಸಿಕೊಳ್ಳುವಿಯೆಂದು ನೆನೆಸುತ್ತೀಯೋ? ಅಥವಾ ದೇವರ ಅಪಾರ ದಯೆಯನ್ನೂ ಶಾಂತಿಸಹನೆಯನ್ನೂ ಉಪೇಕ್ಷಿಸುತ್ತೀಯೋ? ನೀನು ದೇವರಿಗೆ ಅಭಿಮುಖನಾಗಬೇಕೆಂಬ ಉದ್ದೇಶದಿಂದಲೇ ಅವರು ನಿನ್ನ ಮೇಲೆ ಅಷ್ಟು ದಯೆದಾಕ್ಷಿಣ್ಯದಿಂದ ಇದ್ದಾರೆ ಎಂಬುದು ನಿನಗೆ ತಿಳಿಯದೋ? ಆದರೆ ನಿನ್ನ ಕಠಿಣ ಹೃದಯ, ಮೊಂಡುಸ್ವಭಾವ, ಆದ್ದರಿಂದ ದೇವರ ಕೋಪ ಹಾಗು ನ್ಯಾಯವಾದ ತೀರ್ಪು ವ್ಯಕ್ತವಾಗುವ ದಿನದಂದು ನಿನಗೆ ವಿಧಿಸಲಾಗುವಶಿಕ್ಷೆಯನ್ನು ನೀನಾಗಿಯೇ ಸಂಗ್ರಹಿಸಿಕೊಳ್ಳುತ್ತಿದ್ದೀಯೆ. ಪ್ರತಿಯೊಬ್ಬನಿಗೂ ದೇವರು ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ.  ಸತ್ಕಾರ್ಯಗಳಲ್ಲಿ ನಿರತರಾಗಿದ್ದು, ಮಹಿಮೆಯನ್ನು, ಗೌರವವನ್ನು, ಅಮರತ್ವವನ್ನು ಅರಸುತ್ತಾ ಬಾಳುವವರಿಗೆ ದೇವರು ನಿತ್ಯಜೀವವನ್ನು ದಯಪಾಲಿಸುತ್ತಾರೆ. ಸ್ವಾರ್ಥಸಾಧಕರಾಗಿದ್ದು, ಸತ್ಯಕ್ಕೆ ಮಣಿಯದೆ, ದುರ್ಮಾರ್ಗವನ್ನೇ ಅವಲಂಬಿಸಿ ನಡೆಯುವವರ ಮೇಲೆ ದೇವರ ಕೋಪವೂ ಆಕ್ರೋಶವೂ ಎರಗುತ್ತದೆ. ಯೆಹೂದ್ಯರನ್ನು ಮೊದಲ್ಗೊಂಡು, ಇತರರಿಗೂ ಪಾಪಕೃತ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಕಷ್ಟಸಂಕಟಗಳು ಕಾದಿರುತ್ತದೆ. ಅಂತೆಯೇ, ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ಸತ್ಕಾರ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಮಹಿಮೆ, ಗೌರವ, ಶಾಂತಿ ಲಭಿಸುತ್ತವೆ. ದೇವರು ಪಕ್ಷಪಾತಿ ಅಲ್ಲ.

ಕೀರ್ತನೆ: 62:2-3, 6-7, 9
ಶ್ಲೋಕ: ಸರ್ವರಿಗೂ ನೀಡುವೆ ಕೃತ್ಯಕ್ಕೆ ತಕ್ಕ ಫಲ

ಶುಭಸಂದೇಶ: ಲೂಕ 11:42-46


ಯೇಸುಸ್ವಾಮಿ ಫರಿಸಾಯರನ್ನುದ್ದೇಶಿಸಿ ಹೀಗೆಂದರು: "ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ,  ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತು. ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ," ಎಂದರು. ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, "ಬೋಧಕರೇ, ನೀವು ಹಿಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು," ಎಂದನು. ಅದಕ್ಕೆ ಯೇಸು, "ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ," ಎಂದರು.

14.10.2025 - ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.

 ವಾಚನ: ರೋಮನರಿಗೆ  1:16-25

ಶುಭಸಂದೇಶದ ವಿಷಯದಲ್ಲಿ ನಾನು ನಾಚಿಕೆಪಡುವವನೇ ಅಲ್ಲ. ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ  ವಿಶ್ವಾಸಿಸುವ ಪ್ರತಿಯೊಬ್ಬನಿಗೂ ಈ ಶುಭಸಂದೇಶವು ಜೀವೋದ್ಧಾರವನ್ನು ತರುವ ದೇವರ ಶಕ್ತಿಯಾಗಿದೆ. ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. "ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ" ಎಂದು ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆ. ಮಾನವರ ಎಲ್ಲಾ ಪಾಪಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ. ದೇವರ ವಿಷಯವಾಗಿ ಮಾನವರು ಏನನ್ನು ಅರಿತುಕೊಳ್ಳಲು ಸಾಧ್ಯವೋ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ಅದನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ. ದೇವರು ಲೋಕವನ್ನು ಸೃಷ್ಟಿಸಿದಂದಿನಿಂದ ಅವರ ಅಗೋಚರ ಗುಣಲಕ್ಷಣಗಳು, ಅವರ ಅನಂತ ಶಕ್ತಿ ಮತ್ತು ದೈವಸ್ವಭಾವ ಮನುಷ್ಯರಿಗೆ ಸೃಷ್ಟಿಗಳ ಮೂಲಕವೇ ವೇದ್ಯವಾಗುತ್ತಿವೆ. ಆದುದರಿಂದ ಮಾನವರು ತಮ್ಮ ಅಜ್ಞಾನಕ್ಕೆ ಯಾವ ನೆಪವನ್ನು ಒಡ್ಡಲೂ ಸಾಧ್ಯವಿಲ್ಲ. ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ;   ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯವಾಯಿತು. ತಾವೇ ಜ್ಞಾನಿಗಳೆಂದು ಕೊಚ್ಚಿಕೊಳ್ಳುತ್ತ ಅವರು ನಿಜವಾಗಿಯೂ ಮೂರ್ಖರಾದರು. ಅಮರ ದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು. ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಾಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ, ತಮ್ಮತಮ್ಮಲ್ಲೇ ಅಶ್ಲೀಲ ಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು. ಅವರು ದೇವರ ಸತ್ಯವನ್ನು ಬಿಟ್ಟು ಆಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ಯೇ ಆರಾಧಿಸಿ, ಸೇವೆ ಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು, ಆಮೆನ್.

ಕೀರ್ತನೆ: 19:2-3, 4-5

ಶ್ಲೋಕ: ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು


ಶುಭಸಂದೇಶ: ಲೂಕ 11:37-41


ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, "ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ? ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.

12.10.2025 - "ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ"

 ಮೊದಲನೇ ವಾಚನ: 2 ಅರಸರು 5:14-17 


ಎಲೀಷನು ಹೇಳಿದಂತಯೇ ನಾಮಾನನು ಜೋರ್ಡಾನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು. ಆನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. "ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು," ಎಂದು ಹೇಳಿದನು. ಅದಕ್ಕೆ ಎಲೀಷನು, "ನಾನು ಸನ್ನಿಧಿ ಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ," ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ. ಆಗ ಅವನು ಎಲೀಷನಿಗೆ, "ತಾವು ನನ್ನಿಂದ ಏನನ್ನೂ ಸ್ವೀಕರಿಸದಿದ್ದರೆ ತಮ್ಮ ಸೇವಕನಾದ ನನಗೆ ಎರಡು ಹೇಸರುಕತ್ತೆಗಳು ಹೊರುವಷ್ಟು ಮಣ್ಣನ್ನು ಕೂಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಸರ್ವೇಶ್ವರಸ್ವಾಮಿಯೊಬ್ಬರಿಗೇ  ದಹನಬಲಿಗಳನ್ನು ಸಮರ್ಪಿಸಬೇಕೆಂದಿರುತ್ತೇನೆ," ಎಂದು ಹೇಳಿದನು. 

ಕೀರ್ತನೆ: 98:1, 2-3, 3-4 

ಶ್ಲೋಕ: ಪ್ರಕಟಿಹನು ಪ್ರಭು ತನ್ನ ಮುಕ್ತಿವಿಧಾನವನು 

ಎರಡನೇ ವಾಚನ: 2 ತಿಮೊಥೇಯನಿಗೆ  2:8-13 

ಪ್ರಿಯಪುತ್ರನೇ, ಕ್ರಿಸ್ತ ಯೆಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಕೆಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತ ಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ  ಸಹಿಸುತ್ತಿದ್ದೇನೆ. ಈ ಮಾತು ನಂಬತಕ್ಕದ್ದಾಗಿದೆ: ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ. ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ ನಮ್ಮನಾತ ನಿರಾಕರಿಸುತ್ತಾನೆ. ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ,  ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ. 

ಶುಭಸಂದೇಶ: ಲೂಕ 17:11-19 


ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮಿಾಪಿಸಿದಾಗ ಕುಷ್ಟರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, "ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,' ಎಂದು ಕೂಗಿ ಕೇಳಿಕೊಂಡರು. ಯೇಸು ಅವರನ್ನು ನೋಡಿ, "ನೀವು ಯಾಜಕರ ಬಳಿಗೆ ಹೋಗಿರಿ, ಅವರು ನಿಮ್ಮನ್ನು ಪರೀಕ್ಷಿಸಲಿ," ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, "ಹತ್ತುಮಂದಿ ಗುಣ ಹೊಂದಿದರಲ್ಲವೇ? ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?" ಎಂದರು. ಆನಂತರ ಆ ಸಮಾರಿಯದವನಿಗೆ, "ಎದ್ದು ಹೋಗು: ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ," ಎಂದು ಹೇಳಿದರು.