ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.09.2025 - "ದೈವಜ್ಞಾನವೇ ನಿಜವಾದ ಜ್ಞಾನ"

  ಮೊದಲನೇ ವಾಚನ: 1ತಿಮೊಥೇಯನಿಗೆ  3:14-16


ಪ್ರಿಯ ಸಹೋದರನೇ, ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ.  ಒಂದು ವೇಳೆ ನಾನು ಬರುವುದು ತಡವಾದರೆ, ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ತಿಳಿಯಲೆಂದು ಇದನ್ನು ಬರೆದಿದ್ದೇನೆ. ಸಭೆಯು ಸತ್ಯಕ್ಕೆ ಸ್ತಂಭವೂ ಅಸ್ತಿವಾರವೂ ಆಗಿದೆ. ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಟವಾದುದ್ದು ಎಂಬುದು ನಿಸ್ಸಂದೇಹವಾದ ವಿಷಯ. "ನರಮಾನವ ರೂಪದಲ್ಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗೆ ದೇವದೂತರಿಗೆ ಪ್ರದರ್ಶಿತನಾಗಿ, ಅನ್ಯಜನರಿಗೆ ಪ್ರಬೋದಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ."

ಕೀರ್ತನೆ: 111:1-2, 3-4, 5-6
ಶ್ಲೋಕ: ಮಹತ್ತಾದವು ಪ್ರಭುವಿನ ಕಾರ್ಯಗಳು

ಶುಭಸಂದೇಶ : ಲೂಕ 7:31-35


ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ?  ಇವರು ಯಾರನ್ನು ಹೋಲುತ್ತಾರೆ? ಪೇಟೆಬೀದಿಗಳಲ್ಲಿ ಕುಳಿತು, "ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ" ಎಂದು ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಹೋಲುತ್ತಾರೆ. ಸ್ನಾನಿಕ ಯೊವಾನ್ನನು ಬಂದಾಗ ಅನ್ನ ಆಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು, "ಅವನಿಗೆ ದೆವ್ವ ಹಿಡಿದಿದೆ," ಎಂದು ಹೇಳಿದಿರಿ; ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, "ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ," ಎನ್ನುತ್ತೀರಿ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ," ಎಂದರು.

16.09.2025 - "ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು,"

 ಮೊದಲನೇ ವಾಚನ: 1 ತಿಮೊಥೇಯನಿಗೆ  3:1-13


ಅತಿ ಪ್ರಿಯನೇ , ಯಾರಾದರೂ ಧರ್ಮಧ್ಯಕ್ಷನಾಗಲು ಅಪೇಕ್ಷಿಸಿದರೆ, ಅಂಥವನು ಉತ್ತಮ ಸೇವೆಯನ್ನೇ ಬಯಸುತ್ತಾನೆಂಬುದು ನಿಜ. ಅಂಥವನು ನಿಂದಾರಹಿತನಾಗಿರಬೇಕು. ಏಕಪತ್ನಿ ಉಳ್ಳವನು, ಸ್ವಸ್ಥಬುದ್ಧಿಯುಳ್ಳವನು, ಜಿತೇಂದ್ರಿಯನು, ಗೌರವಸ್ಥನು ಮತ್ತು ಅತಿಥಿ ಸತ್ಕಾರ ಮಾಡುವವನು ಆಗಿರಬೇಕು. ಬೊಧಿಸುವುದರಲ್ಲಿ ಪ್ರವೀಣನಾಗಿರಬೇಕು. ಅವನು ಕುಡುಕನು, ಕಲಹ ಪ್ರಿಯನು ಮತ್ತು ಹೊಡೆದಾಡುವವನು ಆಗಿರಬಾರದು. ಶಾಂತನೂ ದಯಾವಂತನೂ ಹಣದ ವ್ಯಾಮೋಹ ಇಲ್ಲದವನೂ ಆಗಿರಬೇಕು. ತನ್ನ ಕುಟುಂಬವನ್ನು ಜವಾಬ್ದಾರಿಯುತವಾಗಿ ನಡೆಸುವವನೂ ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸಿ ಅವರಿಂದ ಗೌರವವನ್ನೂ ಪಡೆದುಕೊಳ್ಳುವವನೂ ಆಗಿರಬೇಕು. ತನ್ನ ಕುಟುಂಬವನ್ನೇ ಜವಾಬ್ದಾರಿಯುತವಾಗಿ ನಡೆಸಲು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ಪರಿಪಾಲಿಸಿಯಾನು? ಆತನು ಹೊಸದಾಗಿ ಕ್ರೈಸ್ತಧರ್ಮವನ್ನು ಅಂಗೀಕರಿಸಿದವನಾಗಿರಬಾರದು. ಇಲ್ಲದಿದ್ದರೆ ಆಹಂಕಾರದಿಂದ ಉಬ್ಬಿಕೊಂಡು ಸೈತಾನನಂತೆಯೇ ದಂಡನೆಗೆ ಗುರಿಯಾದಾನು. ಕ್ರೈಸ್ಥರಲ್ಲದವರಿಂದಲೂ ಆತನು ಒಳ್ಳೆಯವನೆನಸಿಕೊಂಡಿರಬೇಕು. ಹೀಗಿದ್ದರೆ ಮಾತ್ರ ನಿಂದೆಗೊಳಗಾಗದೆ ಸೈತಾನನ ಕುತಂತ್ರಗಳಿಂದ ದೂರವಿರಬಲ್ಲನು. ಸಭಾಸೇವಕರು ಸಜ್ಜನರಾಗಿರಬೇಕು. ಎರಡು ನಾಲಿಗೆಯುಳ್ಳವರೂ ಕುಡುಕರೂ ಲಾಭಕೋರರೂ ಆಗಿರಬಾರದು. ವಿಶ್ವಾಸದ ನಿಗೂಢ ರಹಸ್ಯಗಳನ್ನು ಶುದ್ಧ ಮನಸಾಕ್ಷಿಯಿಂದ ಕಾಪಾಡಿಕೊಂಡು ಬರುವವರಾಗಿರಬೇಕು. ಇವರನ್ನು ಮೊದಲು ಪರೀಕ್ಷೆಗೊಳಪಡಿಸಬೇಕು. ಯಾವುದೇ ಕುಂದುಕೊರತೆ ಕಂಡು ಬರದಿದ್ದಲ್ಲಿ, ಇವರನ್ನು ಸಭಾಸೇವಕರನ್ನಾಗಿ ನೇಮಿಸಬಹುದು. ಅಂತೆಯೇ, ಸಭಾಸೇವಕಿಯರು ಸಜ್ಜನೆಯರಾಗಿರಬೇಕು. ಚಾಡಿಮಾತುಗಳನ್ನು ಆಡುವವರೂ ಮದ್ಯಾಸಕ್ತರು ಆಗಿರದೆ ಎಲ್ಲ ವಿಷಯಗಳಲ್ಲಿ ನಂಬಿಕಸ್ಥರಾಗಿರಬೇಕು ಸಭಾಸೇವಕರು ಏಕಪತ್ನಿಯುಳ್ಳವರಾಗಿದ್ದು ತಮ್ಮ ಮಕ್ಕಳನ್ನೂ ಕುಟುಂಬವನ್ನೂ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವವರಾಗಿರಬೇಕು. ನಿಷ್ಠೆಯಿಂದ ಸೇವೆಸಲ್ಲಿಸುವ  ಸಭಾಸೇವಕರು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾರೆ. ಕ್ರಿಸ್ತ ಯೇಸುವಿನಲ್ಲಿ ಅವರಿಗಿರುವ ವಿಶ್ವಾಸವನ್ನು ಸಾರಲು ಧೈರ್ಯಸ್ಥೈರ್ಯವನ್ನ ಪಡೆಯುತ್ತಾರೆ.

ಕೀರ್ತನೆ: 101:1-2, 2-3, 5, 6

ಶ್ಲೋಕ: ಪ್ರಭೂ, ಸನ್ಮಾರ್ಗದಲೇ ನಾ ನಡೆಯುವೆನು.

ಶುಭಸಂದೇಶ: ಲೂಕ 7:11-17


ಯೇಸುಸ್ವಾಮಿ ನಾಯಿನ್ ಎಂಬ ಊರಿಗೆ ಹೊರಟರು. ಅವರೊಂದಿಗೆ ಶಿಷ್ಯರೂ ಅನೇಕ ಜನರೂ ಹೊರಟರು ಊರ ಬಾಗಿಲನ್ನು ಸಮೀಪಿಸುದಾಗ, ಒಂದು ಶವಯಾತ್ರೆಯನ್ನು ಅವರು ಎದುರುಗೊಂಡರು. ಆ ಸತ್ತವನು ತನ್ನ ತಾಯಿಗೆ ಒಬ್ಬನೇ ಮಗ. ಆಕೆಯೋ ವಿಧವೆ. ಜನರ ದೊಡ್ಡ ಗುಂಪೊಂದು ಆಕೆಯೊಡನೆ ಬರುತ್ತಿತ್ತು. ಪ್ರಭು ಯೇಸು ಆಕೆಯನ್ನು ಕಂಡದ್ದೇ ಕನಿಕರಗೊಂಡು "ಅಳಬೇಡ" ಎಂದು ಹೇಳಿ, ಚಟ್ಟದ ಹತ್ತಿರಕ್ಕೆ ಬಂದು, ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, "ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು," ಎಂದರು. ಸತ್ತವನು ಎದ್ದು ಕುಳಿತು ಮಾತನಾಡಲಾರಂಭಿಸಿದನು. ಯೇಸು ಆ ಮಗನನ್ನು ತಾಯಿಗೆ ಒಪ್ಪಿಸಿದರು. ಎಲ್ಲರೂ ಭಯಭ್ರಾಂತರಾದರು. "ಮಹಾ ಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ;  ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ," ಎಂದು ದೇವರನ್ನು ಕೊಂಡಾಡಿದರು. ಯೇಸುವಿನ ಈ ಸಮಾಚಾರ ಜುದೇಯ ನಾಡಿನಲ್ಲೆಲ್ಲಾ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲೆಲ್ಲಾ ಹರಡಿತು.

15.09.2025 - "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ"

  ಮೊದಲನೇ ವಾಚನ: 1 ತಿಮೊಥೇಯನಿಗೆ 2:1-8



ಮೊತ್ತ ಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ  ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತವಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ಧಾರಕರಾದ ದೇವರಿಗೆ ಮೆಚ್ಚುಗೆಯಾದುದು. ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ, ದೇವರು ಒಬ್ಬರೇ,  ಅವರೇ ಮಾನವರಾಗಿರುವ ಕ್ರಿಸ್ತಯೇಸು. ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು.  ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು.  ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.

ಕೀರ್ತನೆ: 28:2, 7, 8-9
ಶ್ಲೋಕ: ಪ್ರಭುವಿಗೆನ್ನ ಕೃತಜ್ಞತಾ ವಂದನೆ. 

ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು I
ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು II
ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ ನಂಬುಗೆ I
ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ ನೆರವಿಗೆ II

ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು I
ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು II
ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ ಜನರನು I
ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು ಸಾಗಿಸು ಅವರನು II

ಶುಭಸಂದೇಶ: ಲೂಕ 7:1-10


ಜನರಿಗೆ ಮನಮುಟ್ಟುವಂತೆ ಬೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು. ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. ಶತಾಧಿಪತಿ ಯೇಸುವಿನ ವಿಷಯವನ್ನು ಕೇಳೆ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕರನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. ಅವರು ಯೇಸುವಿನ ಬಳಿಗೆ ಬಂದು, "ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಆರ್ಹನು. ನಮ್ಮ ಜನರ ಮೆಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ  ನಮ್ಮ ಪ್ರಾರ್ಥನಾ ಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ," ಎಂದು ಬಹಳವಾಗಿ ವಿನಂತಿಸಿದರು. ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ ಶತಾಧಿಪತಿ ತನ್ನ ಗೆಳೆಯರ ಮುಖಾಂತರ, "ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು  ಯೋಗ್ಯತೆ ನನಗಿಲ್ಲ. ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈ ಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು "ಬಾ, ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ "ಹೋಗು," ಎಂದರೆ ಹೋಗುತ್ತಾನೆ. ಸೇವಕನಿಗೆ "ಇಂಥದ್ದನ್ನು ಮಾಡು," ಎಂದರೆ ಮಾಡುತ್ತಾನೆ," ಎಂದು ಹೇಳಿ ಕಳುಹಿಸಿದನು. ಅವನ ಈ ಮಾತುಗಳನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿ ನೋಡಿ, "ಇಂಥ ಗಾಢ ವಿಶ್ವಾಸವನ್ನು  ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು. ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆ ಬಿದ್ದಿದ್ದ ಆ ಸೇವಕನು ಸ್ವಸ್ಥವಾಗಿದ್ದುದನ್ನು ಕಂಡರು.

14.09.2025 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

  ಮೊದಲನೇ ವಾಚನ: ಸಂಖ್ಯಾಕಾಂಡ - 21:4-9



ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿಂದವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತನಾಡತೊಡಗಿದರು: "ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,", ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹು ಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, "ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ," ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜ ಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿಯೊಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು," ಎಂದು ಆಜ್ಞಾಪಿಸಿದರು. ಅಂತೆಯೇ ಮೋಶೆ ಕಂಚಿನಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜ ಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ  ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 78:1-2, 34-38
ಶ್ಲೋಕ: ಮರೆಯದಿರು ಪ್ರಭುವಿನ ಮಹತ್ಕಾರ್ಯಗಳನು

ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ|
ಗಮನಕೊಡಿ ನಾ ಹೇಳುವ ಮಾತುಗಳಿಗೆ||
ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು|
ಹೊರಪಡಿಸುವೆನು ಪೂರ್ವಕಾಲದ ಗೂಢಾರ್ಥಗಳನು||

ಆತನನು ನೆನಸಿಕೊಂಡರವರು ವಧೆಯಾಗುವಾಗ|
ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ||
ನೆನೆದರಾಗ ದೇವರೇ ತಮಗಾಶ್ರಯದುರ್ಗವೆಂದು|
ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು||

ಆದರೆ ಅವರ ನಾಲಿಗೆಯಾಡಿತು ಅಸತ್ಯ|
ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ||
ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ|
ಬದ್ದರಾಗಿರಲಿಲ್ಲ ಆತನ ನಿಬಂಧನೆಗಳಲಿ||

ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ|
ಕೋಪವ ತಾಳಿಕೊಂಡನು, ಹಲವು ವೇಳೆ ಉದ್ರೇಕಗೊಳ್ಳದೆ||

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ಜೀವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವ ಪರಮನು, ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು,  "ಕ್ರಿಸ್ತ ಯೇಸುವೇ ಪ್ರಭು", ಎಂದೆಲ್ಲರಿಗೆ ಅರಿಕೆ ಮಾಡುವರು ಪಿತ ದೇವನ ಮಹಿಮೆಯನ್ನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಯೊವಾನ್ನ 3:13-17



ಯೇಸು ನಿಕೊದೇಮನಿಗೆ ಇಂತೆಂದರು: "ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿ ಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.

13.09.2025 -"ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ?"

 ಮೊದಲನೇ ವಾಚನ : 1 ತಿಮೋಥಿ 1:15-17

ಕ್ರಿಸ್ತಯೇಸು, ಪಾಪಿಗಳ ಉದ್ಧಾರಕ್ಕಾಗಿ ಈ ಲೋಕಕ್ಕೆ ಬಂದರು ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು. 
ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ. ಸರ್ವಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೆ ಗೌರವವೂ ಮಹಿಮೆಯೂ ಸಲ್ಲಲಿ! ಆಮೆನ್.



 ಕೀರ್ತನೆ: 113: 1-7
 ಶ್ಲೋಕ: ಪ್ರಭುವಿನ ಸಿರಿನಾಮವು ಇಂದಿಗೂ ಎಂದೆಂದಿಗೂ ಪೂಜ್ಯ

ಪ್ರಭುವಿನ ದಾಸರೇ, ಸ್ತುತಿಮಾಡಿ I
ಪ್ರಭುವಿನ ನಾಮ ಸ್ತುತಿಯನು ಮಾಡಿ II
ಪ್ರಭುವಿನ ಸಿರಿನಾಮವು ಪೂಜ್ಯ I
ಇಂದಿಗೂ ಎಂದೆಂದಿಗೂ ಪೂಜ್ಯ II

ಪ್ರಭುವಿನಾ ಸಿರಿನಾಮವು ಸ್ತುತ್ಯ I
ಪೂರ್ವ ಪಶ್ಚಿಮದವರೆಗೂ ಸ್ತುತ್ಯ II
ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ I
ಆತನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ II
ನಮ್ಮ ಪ್ರಭು ದೇವನಂತೆ ಯಾರು ಸಮರ್ಥ I
ಉನ್ನತದಲಿ ಆಸನಾರೂಢನು ಆತ I
ಇಹಪರಗಳನು ವೀಕ್ಷಿಸಲಾತ ಶಕ್ತ II
ದೀನರನು ಎಬ್ಬಿಸುವನು ಧೂಳಿನಿಂದ I
ಬಡವರನು ಎತ್ತುವನು ತಿಪ್ಪೆಯಿಂದ II

ಶುಭಸಂದೇಶ: ಲೂಕ  6:43-49

ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 
ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ. “ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ? ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನೂ ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ: ಆಳವಾಗಿ ಅಡಿಪಾಯ ತೆಗೆದು, ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ, ಮನೆಕಟ್ಟಿದವನಿಗೆ ಅವನು ಸಮಾನನು; ಹುಚ್ಚು ಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ. ಕಾರಣ - ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು. ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದೆ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಪ್ರವಾಹವು ಅಪ್ಪಳಿಸಿದಾಗ ಒಡನೆಯೇ ಅದು ಕುಸಿದು ಬಿತ್ತು. ಆ ಮನೆಗೆ ಒದಗಿದ ಪತನವೋ ವಿಪರೀತ!” ಎಂದರು.

12.09.2025 - "ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು"

  ಮೊದಲನೇ ವಾಚನ: 1 ತಿಮೊಥೇಯನಿಗೆ 1:1-2, 12-14


ಕ್ರೈಸ್ತ ವಿಶ್ವಾಸದಲ್ಲಿ ಸತ್ ಪುತ್ರನಾದ ತಿಮೊಥೇಯನಿಗೆ - ಪೌಲನು ಬರೆಯುವ ಪತ್ರ. ನಮ್ಮ ಉದ್ಧಾರಕರಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತ ಯೇಸುವಿನ ಆಜ್ಞಾನುಸಾರ, ನಾನು ಕ್ರಿಸ್ತ ಯೇಸುವಿನ ಪ್ರೇಷಿತನಾಗಿದ್ದೇನೆ. ಪಿತನಾದ ದೇವರೂ ನಮ್ಮ ಪ್ರಭುವಾದ ಕ್ರಿಸ್ತ ಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ! ಶುಭ ಸಂದೇಶದ ಸೇವೆಯನ್ನು ಕೈಗೊಳ್ಳಲು ಯೋಗ್ಯನೆಂದು ಎಣಿಸಿ ನನಗೆ ಬೇಕಾದ ಶಕ್ತಿಸಾಮರ್ಥ್ಯವನ್ನು ದಯಪಾಲಿಸಿದ ನಮ್ಮ ಪ್ರಭು ಯೇಸುಕ್ರಿಸ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹಿಂದೆ ನಾನು ಅವರನು ದೂಷಿಸಿದೆ, ಹಿಂಸಿಸಿದೆ, ಅವಮಾನಪಡಿಸಿದೆ. ಆದರೆ ದೇವರು ದಯಾಮಯಿ; ಆಗ ನಾನು ತಿಳಿಯದೆ ಅವಿಶ್ವಾಸಿಯಾಗಿ ಹಾಗೆ ಮಾಡಿದ್ದರಿಂದ ದೇವರು ನನಗೆ ಕರುಣೆ ತೋರಿದರು. ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಿಂದ ಲಭಿಸುವ ಪ್ರೀತಿ ವಿಶ್ವಾಸದಲ್ಲಿ ಭಾಗಿಯಾಗುವಂತೆ ಅವರು ನನ್ನ ಮೇಲೆ ತಮ್ಮ ಕೃಪಾವರಗಳನ್ನು ಹೇರಳವಾಗಿ ಸುರಿಸಿದರು.

ಕೀರ್ತನೆ: 16:1-2, 5, 6-7, 8-9
ಶ್ಲೋಕ: ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ ಪ್ರಭು

ನೀಡು ದೇವಾ ರಕ್ಷಣೆಯನು I
ನಾ ನಿನಗೆ ಶರಣಾಗತನು II
“ನೀನೇ ನನ್ನೊಡೆಯ"ನೆಂದು ನಾ ನುಡಿದೆ I
ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II

ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I
ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ II
ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I
ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II

ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II
ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I
ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II

ಶುಭಸಂದೇಶ: ಲೂಕ 6:39-42


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೇ? ಗುರುವಿಗಿಂತ ಶಿಷ್ಯನು ಶ್ರೇಷ್ಟನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, "ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ," ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಆನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು,"

11.09.2025 - "ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು,"

 ಮೊದಲನೇ ವಾಚನ: ಕೊಲೊಸ್ಸೆಯರಿಗೆ 3:12-17


ಸಹೋದರರೇ, ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು, ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣವಾಗಿರಲಿ. ಒಬ್ಬರನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು  ಸಂಪೂರ್ಣಗೊಳಿಸುವ ಬಂಧನ. ನಿಮ್ಮ ಹೃನ್ಮನಗಳು ಕ್ರಿಸ್ತ ಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ;  ಕೃತಜ್ಞತೆಯುಳ್ಳವರಾಗಿ ಜೀವಿಸಿರಿ. ಕ್ರಿಸ್ತ ಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿ ಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ರಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ. ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ಕೀರ್ತನೆ: 150:1-2, 3-4, 5-6

ಶ್ಲೋಕ: ಪ್ರಭುವನು ಸ್ತುತಿಸಲಿ ಉಸಿರಿರುವುದೆಲ್ಲವೂ

ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು I
ಹಗಲಿರುಳೆನ್ನದೆ ಅದನೆ ಧ್ಯಾನಿಸುತಿರುವವನಾರೋ ಅವನೇ ಧನ್ಯನು II
ದುರ್ಜನರ ಆಲೋಚನೆಯಂತೆ ನಡೆಯದೆ I
ಪಾಪಾತ್ಮರ ಪಥದಲಿ ಕಾಲೂರದೆ I
ಧರ್ಮನಿಂದಕರ ಕೂಟದಲಿ ಕೂರದೆ II

ನದಿಯ ಬದಿಯಲೇ ಬೆಳೆದಿಹ ಮರದಂತೆ I
ಸಕಾಲಕೆ ಫಲವೀವ ವೃಕ್ಷದಂತೆ I
ಎಲೆಬಾಡದೆ ಪಸಿರಿರುವ ತರುವಂತೆ I
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ II

ದುರುಳರಾದರೊ ತೂರಿ ಹೋಗುವರು I
ಬಿರುಗಾಳಿಗೆ ತರಗೆಲೆಯಾಗುವರು II
ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ I
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ II

ಶುಭಸಂದೇಶ: ಲೂಕ 6:27-38 



ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: "ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು. ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೇ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ಹಾಗೆಯೇ ಮಾಡುತ್ತಾರಲ್ಲವೇ? ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಟರು ಸಹ ಸಾಲ ಕೊಡುತ್ತಾರಲ್ಲವೆ? ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವರಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ ಒಳ್ಳೆಯವರು, ಕೃತಘ್ನರಿಗೂ ಒಳ್ಳೆಯವರು. ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ, ಆಗ ದೇವರೂ ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು," ಎಂದರು.

10.09.2025 - "ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! "

 ಮೊದಲನೇ ವಾಚನ: ಕೊಲೊಸ್ಸೆಯರಿಗೆ 3:1-11 


ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ದಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನ ಕೊಡಿ. ಕ್ರಿಸ್ತ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತ ಯೇಸುವಿನೊದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ. ಕ್ರಿಸ್ತ ಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ. ನಿಮ್ಮಲ್ಲಿರುವ ಪ್ರಾಪಂಚಿಕ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿರಿ, ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿಗ್ರಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ. ಇಂಥವುಗಳಿಗೆ ಈಡಾಗುವ ದುಷ್ಕರ್ಮಿಗಳು ದೇವರ ಕೋಪಾಗ್ನಿಗೆ ಗುರಿಯಾಗುತ್ತಾರೆ. ಒಮ್ಮೆ ಇವೆಲ್ಲ ನಿಮ್ಮ ಜೀವನದ ರೀತಿ ನೀತಿಗಳಾಗಿದ್ದು ಇವುಗಳಲ್ಲೇ ಮಗ್ನರಾಗಿದ್ದೀರಿ. ಈಗಲಾದರೋ ಕೋಪ, ರೋಷ, ಮತ್ಸರ ಇವುಗಳನ್ನು ತ್ಯಜಿಸಿರಿ; ದೂಷಣೆ ಮತ್ತು ಹೊಲಸು ಮಾತುಗಳು ನಿಮ್ಮ ಬಾಯಿಂದ ಬರಕೂಡದು. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ, ನಿಮ್ಮಲ್ಲಿದ್ದ ಹಳೆಯ ಸ್ವಭಾವವನ್ನೂ ಅದಕ್ಕೆ ಸಂಬಂಧಿಸಿದ ದುರಭ್ಯಾಸಗಳನ್ನೂ ತೊರೆದುಬಿಟ್ಟಿದ್ದೀರಿ. ಮಾತ್ರವಲ್ಲ, ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಿ. ನೀವು ಸೃಷ್ಟಿಕರ್ತನನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸ್ವಭಾವವನ್ನು ಅನುದಿನವೂ ನವೀಕರಿಸಲಾಗುತ್ತಿದೆ. ಇಂಥ ಹೊಸ ಜೀವನದಲ್ಲಿ ಯೆಹೂದ್ಯ - ಗ್ರೀಕ, ಸುನ್ನತಿ ಹೊಂದಿದವ - ಸುನ್ನತಿ ಇಲ್ಲದವ, ನಾಗರಿಕ - ಅನಾಗರಿಕ, ಯಜಮಾನ - ಗುಲಾಮ ಎಂಬ ಭಿನ್ನಭೇದಗಳಿಲ್ಲ. ಕ್ರಿಸ್ತ ಯೇಸುವೇ ಸಮಸ್ತದಲ್ಲಿ ಸಮಸ್ತವೂ ಆಗಿದ್ದಾರೆ.

ಕೀರ್ತನೆ: 145:2-3, 10-11, 12-13
ಶ್ಲೋಕ: ಪ್ರಭುವಿನ ಕರುಣೆ ಎಲ್ಲರ ಮೇಲೆ

ಶುಭಸಂದೇಶ: ಲೂಕ 6:20-26


ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು:  "ದೀನದಲಿತರೇ,,  ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕು ನಲಿದಾಡುವಿರಿ! ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ, ಬಹಿಷ್ಕರಿಸಿ, ಧಿಕ್ಕರಿಸಿ, ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸುವಾಗ ನೀವು ಭಾಗ್ಯವಂತರು! ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದರು. ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲವು ಮಹತ್ತರವಾದುದು. ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ. ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ. ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು.

09.09.2025 - "ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು."

 

 ಮೊದಲನೇ ವಾಚನ: ಕೊಲೊಸ್ಸೆಯರಿಗೆ 2:6-15


ನೀವು ಯೇಸುಕ್ರಿಸ್ತರನ್ನು ಪ್ರಭುವಾಗಿ ಸ್ವೀಕರಿಸಿರುವುದರಿಂದ, ಅವರೊಡನೆ  ಐಕ್ಯೆತೆಯಿಂದ ಬಾಳಿರಿ. ಅವರಲ್ಲಿ ಸ್ಥಿರವಾಗಿರಿ. ಅವರನ್ನೇ ಅವಲಂಬಿಸಿ ನಿಮ್ಮ ಬಾಳೆಂಬ ಸೌಧವನ್ನು ನಿರ್ಮಿಸಿರಿ. ನೀವು ಕಲಿತುಕೊಂಡಿರುವಂತೆ ನಿಮ್ಮ ವಿಶ್ವಾಸ ಅವರಲ್ಲಿ ದೃಢವಾಗಿರಲಿ. ಕೃತಜ್ಞತೆಯು ನಿಮ್ಮಲ್ಲಿ ಉಕ್ಕೇರಲಿ, ಪ್ರಪಂಚದ ಪ್ರಬಲ ಶಕ್ತಿಗಳಿಂದಲೂ ಮಾನವ ವಿವೇಚನೆಯ ಶುಷ್ಕತರ್ಕ ಸಿದ್ಧಾಂತಗಳಿಂದಲೂ ಯಾರೂ ನಿಮ್ಮನ್ನು ಮೋಸಗೊಳಿಸಿ ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಇವುಗಳು ಪ್ರಾಪಂಚಿಕ ಪಾರಂಪರ್ಯಕ್ಕೆ ಮತ್ತು ವಿಶ್ವದ ಮೂಲಭೂತ ಶಕ್ತಿಗಳಿಗೆ ಸಂಬಂಧಿಸಿದವುಗಳೇ ಹೊರತು ಯೇಸುಕ್ರಿಸ್ತರಿಗಲ್ಲ. ದೈವತ್ವದ ಸಂಪೂರ್ಣತೆ ಸಶರೀರವಾಗಿ ಯೇಸುಕ್ರಿಸ್ತರಲ್ಲಿ ನೆಲೆಗೊಂಡಿದೆ. ಸಕಲ ಅಧಿಪತ್ಯಕ್ಕೂ ಅಧಿಕಾರಕ್ಕೂ ಶಿರಸ್ಸು ಅವರೇ. ಅವರಲ್ಲಿ ಮಾತ್ರ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ಕ್ರಿಸ್ತಯೇಸುವಿನಲ್ಲಿಯೇ ನೀವು ಸುನ್ನತಿಯನ್ನು ಪಡೆದಿದ್ದೀರಿ. ಇದು ಶಾರೀರಕ ಸುನ್ನತಿಯಲ್ಲ, ಪಾಪಮಯ ಸ್ವಭಾವವನ್ನು ಕಿತ್ತೊಗೆಯುವ ಸುನ್ನತಿ. ಸ್ವಯಂ ಕ್ರಿಸ್ತಯೇಸುವೇ ಯೋಜಿಸಿದ ‌ಸುನ್ನತಿ. ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ ಸಮಾಧಿಯಾದಿರಿ. ಕ್ರಿಸ್ತ ಯೇಸುವನ್ನು ಮೃತರ ಮಧ್ಯದಿಂದ ದೈವರು ತಾವೇ ಎಬ್ಬಿಸಿದರು. ಈ ದೇವರ ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ ಎಬ್ಬಿಸಲಾಯಿತು. ನಿಮ್ಮ ಪಾಪಮಯ ಜೀವನದಿಂದಲೂ ಸುನ್ನತಿ ರಹಿತವಾದ ಸ್ವಭಾವದಿಂದಲೂ ಒಮ್ಮೆ ನೀವು ಮೃತರಾಗಿದ್ದಿರಿ. ಆದರೆ ಈಗ ದೇವರು ಕ್ರಿಸ್ತ ಯೇಸುವಿನೊಂದಿಗೆ ನಿಮ್ಮನ್ನು ಜೀವಂತಗೊಳಿಸಿದ್ದಾರೆ. ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂದಿಸಿದ್ದ ಧರ್ಮಶಾಸ್ತ್ರದ ವಿಧಿ ನಿಯಮಗಳನ್ನು ಕ್ರಿಸ್ತಯೇಸು ತೊಡೆದುಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ. ಬಲಾಢ್ಯ ಒಡೆಯರನ್ನೂ ಅಧಿಕಾರಿಗಳನ್ನೂ ನಿರಾಯುಧರನ್ನಾಗಿ ಮಾಡಿ, ತಾವು ಗಳಿಸಿದ ಜಯದ ನಿಮಿತ್ತ ಜನರೆಲ್ಲರ ಮುಂದೆ ಶಿಲುಬೆಯ ವಿಜಯೋತ್ಸವದಲ್ಲಿ ಅವರನ್ನು ಸೆರೆಯಾಳುಗಳನ್ನಾಗಿ ಪ್ರದರ್ಶಿಸಿದ್ದಾರೆ.

ಕೀರ್ತನೆ: 145:1-2, 8-9, 10-11
ಶ್ಲೋಕ: ಪ್ರಭುವಿನ ಕರುಣೆ ಎಲ್ಲರ ಮೇಲೆ

ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ I
ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ II
ಹೊಗಳುವೆನು ನಾ ದಿನದಿನವೂ ನಿನ್ನನು I
ಭಜಿಸುವೆನೆಂದೆಂದಿಗೂ ನಿನ್ನ ಹೆಸರನು II

ಪ್ರಭು ದಯಾನಿಧಿ, ಕೃಪಾಸಾಗರನು I
ಸಹನಶೀಲನು, ಪ್ರೀತಿಪೂರ್ಣನು II
ಪ್ರಭುವಿನ ಕರುಣೆ ಎಲ್ಲರ ಮೇಲೆ I
ಆತನ ಕೃಪೆಯು ಸೃಷ್ಟಿಯ ಮೇಲೆ II

ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I
ಕೊಂಡಾಡುವುದು ನಿನ್ನನು ಭಕ್ತ ಸಮೂಹವು II
ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II

ಘೋಷಣೆ           ಯೊವಾನ್ನ  6:63,68

ಅಲ್ಲೆಲೂಯ, ಅಲ್ಲೆಲೂಯ!
ಸಜೀವವನ್ನು  ಕೊಡುವಂಥಾದ್ದು  ದೇವರ  ಆತ್ಮವೇ |  ನಿತ್ಯ  ಜೀವವನ್ನೀಯುವ  ನುಡಿ  ಇರುವುದು  ತಮ್ಮಲ್ಲೇ ||
ಅಲ್ಲೆಲೂಯ!

ಶುಭಸಂದೇಶ: ಲೂಕ 6:12-19


ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು, ಅವರಿಗೆ "ಪ್ರೇಷಿತರು" ಎಂದು ಹೆಸರಿಟ್ಟರು. ಹೀಗೆ ಆಯ್ಕೆ ಆದವರು; ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಆಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೋಲೊಮಾಯ, ಮತ್ತಾಯ ಮತ್ತು ತೋಮ, ಆಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಆನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರ ತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

08.09.2025 - “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು”

 ಮೊದಲನೇ ವಾಚನ: ಮೀಕ 5:1-4

ಸಿಯೋನ್ ನಗರಿಯೇ, ನಿನ್ನ ಸೇನಾವ್ಯೂಹಗಳನ್ನು ಒಟ್ಟುಗೂಡಿಸು. ಇಗೋ, ಶತ್ರುಗಳು ನಮಗೆ ಮುತ್ತಿಗೆಹಾಕಿದ್ದಾರೆ. ಅವರು ಇಸ್ರಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು! ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು. ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು. ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

ಕೀರ್ತನೆ: 13:6, 6

ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ

ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I
ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II

ಪ್ರಭು ಮಾಡಿದ ಮಹೋಪಕಾರಗಳಿಗಾಗಿ I
ಹಾಡುವೆ ಗೀತವನು ಮನಃಪೂರ್ವಕವಾಗಿ II

ಶುಭಸಂದೇಶ: ಮತ್ತಾಯ 1:1-16, 18-23


ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ: ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು. ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು. ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್, 5ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ, ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್, ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ, ಅಬೀಯನಿಗೆ ಆಸನ್ ಹುಟ್ಟಿದರು. ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು. ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು. ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್,  ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು. ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್, ಸಲಥಿಯೇಲನಿಗೆ ಜೆರುಬಾಬೆಲ್,  ಜೆರುಬಾಬೆಲನಿಗೆ ಅಬೀಹೂದ್, ಅಬೀಹೂದನಿಗೆ ಎಲ್ಯಕೀಮ್. ಎಲ್ಯಕೀಮನಿಗೆ ಅಜೋರ್ ಹುಟ್ಟಿದರು.  ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್,  ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು. ಈ ಮರಿಯಳಿಂದಲೇ “ಕ್ರಿಸ್ತ” ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು; ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭ ಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು.  ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, “ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ.  ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ,” ಎಂದನು. “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು” ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.  “ಇಮ್ಮಾನುವೇಲ್” ಎಂದರೆ, “ದೇವರು ನಮ್ಮೊಡನೆ ಇದ್ದಾರೆ” ಎಂದು ಅರ್ಥ.

ಮರಿಯಮ್ಮನವರ ಗೀತೆಗಳು


                                            

07.09.2025 -

 ಮೊದಲನೇ ವಾಚನ: ಸುಜ್ಞಾನ ಗ್ರಂಥ 9:13-18


ದೇವರ ಸಂಕಲ್ಪವನ್ನು ಅರಿಯಬಲ್ಲವನಾರು? ಸರ್ವೇಶ್ವರನ ಚಿತ್ತವೇನೆಂದು ಗ್ರಹಿಸಬಲ್ಲವನಾರು? ಮರ್ತ್ಯ ಮಾನವರ ವಿವೇಚನೆ

ಅಸಮರ್ಪಕವಾದುದೇ ನಮ್ಮ ಯೋಜನೆಗಳೆಲ್ಲ ಕೈಗೂಡದೆ ಹೋಗುವಂಥವೇ.

 ಈ ನಶ್ವರ ದೇಹ ಅಂತರಾತ್ಮವನ್ನು ಕುಗ್ಗಿಸುತ್ತದೆ ಈ ಮಣ್ಣಿನ ಗುಡಾರ, ಚಿಂತಾಭರಿತ ಮನಕ್ಕೊoದು ಭಾರವೆ.

 ಧರೆಯ ಮೇಲಿನ ವಿಷಯಗಳನ್ನು ತಿಳಿಯುವುದೆಷ್ಟೋ ಕಷ್ಟಕರ ಕೈಗೆಟಕುವುಗಳನ್ನೇ ಕಂಡರಿತುಕೊಳ್ಳುವುದು

ಎಷ್ಟೋ ಪ್ರಯಾಸಕರ. ಇಂತಿರಲು, ಸ್ವರ್ಗದಲ್ಲಿರುವುದನು ಬಯಲಿಗೆ ತರಲು ಯಾರು ಸಮರ್ಥ? ನೀವು ನಿಮ್ಮ ಸುಜ್ಞಾನವನ್ನು

ಅನುಗ್ರಹಿಸದೆ ಹೋಗಿದ್ದರೆ ನಿಮ್ಮ ಪವಿತ್ರಾತ್ಮನನ್ನು ಸ್ವರ್ಗದಿಂದ ಕಳುಹಿಸದೆ ಹೋಗಿದ್ದರೆ ನಿಮ್ಮ ಸಂಕಲ್ಪವನ್ನು ಯಾರಾದರು

ಅರಿಯುತ್ತಿದ್ದರೆ? ಹೀಗೆ ಲೋಕದ ಮಾರ್ಗಗಳನ್ನು ತಿದ್ದಲಾಯಿತು, ನಿಮಗೆ ಮೆಚ್ಚುಗೆಯಾದುದನು ಜನರಿಗೆ ಕಲಿಸಲಾಯಿತು,

  ಸುಜ್ಞಾನದಿಂದಲೇ ಅವರಿಗೆ ರಕ್ಷಣೆ ಲಭಿಸುವಂತಾಯಿತು.


ಕೀರ್ತನೆ: 90:3-6.12-13.14.17
ಶ್ಲೋಕ:ಪ್ರಭೂ, ತಲತಲಾಂತರಕ್ಕೆ 
ಶ್ರೀನಿವಾಸ ನೀನೆಮಗೆ 

1.ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ 
  ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ಎನ್ನುತಿಹೆ 
ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ 
  ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ 

2. ಮನುಜರು ನೀ ಹರಿದೋಡಿಸುವ ಹೊಯಿಲು 
  ಇರುಳಿನ ಕನಸು, ಹಗಲಿನ ಗರಿಹುಲ್ಲು 
 ಚಿಗುರಿ ಹೂಬಿಡುವುದದು ಬೆಳಗಿನಲಿ 
  ಸೊರಗಿ ತರಗಾಗುವುದು ಬೈಗಿನಲಿ 

3.ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು 
   ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು 
 ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ?
  ನಿನ್ನೀ ಸೇವಕರ ಮೇಲಿರಲಿ ಮರುಕ 

ಎರಡನೇ ವಾಚನ: ಪೌಲನು ಫಿಲೆಮೋನನಿಗೆ ಬರೆದ ಪತ್ರ 1:9-10.12-17


ಆದರೂ ನಿನ್ನ ಮೇಲಿರುವ ಪ್ರೀತಿಯ ನಿಮಿತ್ತ ನಾನು ನಿನ್ನಲ್ಲಿ ವಿನಂತಿಸುತ್ತೇನೆ: ವೃದ್ಧಪ್ರಾಯನೂ ಮತ್ತು ಕ್ರಿಸ್ತಯೇಸುವಿಗೋಸ್ಕರ ಈಗ ಸೆರೆಯಾಳೂ ಆಗಿರುವ ಪೌಲನೆಂಬ ನಾನು ಒನೇಸಿಮನ ಪರವಾಗಿ ನಿನ್ನಲ್ಲಿ ವಿಜ್ಞಾಪಿಸುತ್ತೇನೆ. ಇವನು ಯೇಸುವಿನಲ್ಲಿ ನನ್ನ ಸ್ವಂತ ಮಗನಂತಿದ್ದಾನೆ. ಸೆರೆಮನೆಯಲ್ಲೇ ನಾನು ಅವನನ್ನು ಆಧ್ಯಾತ್ಮಿಕವಾಗಿ ಪಡೆದೆನು. ನನಗಂತೂ ಇವನು ಪ್ರಾಣದಂತಿದ್ದರೂ ಈಗ ನಿನ್ನ ಬಳಿಗೆ ಕಳುಹಿಸುತ್ತಿದ್ದೇನೆ. ಶುಭಸಂದೇಶಕ್ಕೋಸ್ಕರ ನಾನು ಸೆರೆಮನೆಯಲ್ಲಿರುವಾಗ ನಿನ್ನ ಬದಲಾಗಿ ನನಗೆ ಸಹಾಯಮಾಡಲು ಇವನನ್ನು ಇಲ್ಲಿಯೇ ಉಳಿಸಿಕೊಳ್ಳಲು ಇಷ್ಟವಿತ್ತು. ಆದರೆ ನನಗೆ ಸಹಾಯವಾಗಲೆಂದು ನಿನ್ನನ್ನು ಖಡ್ಡಾಯಪಡಿಸಲು ನನಗಂತೂ ಇಷ್ಟವಿಲ್ಲ. ನೀನಾಗಿಯೇ ನಿನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದ್ದರಿಂದ ನಿನ್ನ ಒಪ್ಪಿಗೆಯಿಲ್ಲದೆ ನಾನು ಏನನ್ನೂ ಮಾಡುತ್ತಿಲ್ಲ. ಸ್ವಲ್ಪಕಾಲ ಒನೇಸಿಮನು ನಿನ್ನಿಂದ ದೂರವಿದ್ದುದಕ್ಕೆ ಕಾರಣ ಆತನು ಸದಾಕಾಲ ನಿನ್ನವನಾಗುವುದಕ್ಕೋ ಏನೋ. ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ, ಅದಕ್ಕಿಂತಲೂ ಬಹಳ ಮೇಲಾದವನಂತೆ, ಕ್ರಿಸ್ತಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ? ಆದ್ದರಿಂದ ಕ್ರಿಸ್ತಯೇಸುವಿನಲ್ಲಿ ನಿನಗೂ ನನಗೂ ಅನ್ಯೋನ್ಯತೆ ಇದೆಯೆಂದು ನೀನು ಪರಿಗಣಿಸುವುದಾದರೆ ನನ್ನನ್ನು ಹೇಗೆ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಇವನನ್ನೂ ಸ್ವಾಗತಿಸು. 

ಶುಭಸಂದೇಶ: ಲೂಕ 14:25-33

ಜನರು ಗುಂಪುಗುoಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು: “ನನ್ನಲ್ಲಿಗೆ ಬರುವ ಯಾರೊಬ್ಬನೂ ತನ್ನ ತಂದೆ-ತಾಯಿ, ಹೆಂಡತಿ-ಮಕ್ಕಳು, ಸೋದರ-ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ ಹೊರತು, ನನ್ನ ಶಿಷ್ಯನಾಗಲಾರನು. ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬರದವನು ನನ್ನ ಶಿಷ್ಯನಾಗಲಾರನು. ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚು ವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ? ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು, ‘ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!’ ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು. ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ? ಸಾಧ್ಯವಿಲ್ಲದಿದ್ದರೆ, ಶತ್ರುರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ. ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ. 


06.09.2025 - "ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,"

  ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:21-23


ಸಹೋದರರೇ, ಹಿಂದೆ ನೀವು ಆಚಾರವಿಚಾರಗಳಲ್ಲಿ ಕೆಟ್ಟವರಾಗಿದ್ದರಿಂದ ದೇವರ ವಿರೋಧಿಗಳಾಗಿದ್ದು ಅವರಿಂದ ದೂರವಿದ್ದೀರಿ. ಈಗಲಾದರೋ ಯೇಸುಕ್ರಿಸ್ತರ ದೈಹಿಕ ಮರಣದ ಫಲವಾಗಿ ನಿಮಗೂ ದೇವರಿಗೂ ಸಂಧಾನ ನಡೆದಿದೆ. ಹೀಗೆ ದೇವರು ನಿಮ್ಮನ್ನು ತಮ್ಮ ಸನ್ನಿಧಿಗೆ ಸೇರಿಸಿಕೊಳ್ಳಲು ನೀವು ಪವಿತ್ರರೂ ನಿಷ್ಕಳಂಕರೂ ದೋಷರಹಿತರೂ ಆಗಿರುವಂತೆ ಮಾಡಿದ್ದಾರೆ. ಇನ್ನು ನೀವು ವಿಶ್ವಾಸದಲ್ಲಿ ದೃಡವಾಗಿ ಮುನ್ನಡೆಯಬೇಕು. ಶುಭಸಂದೇಶವನ್ನು ಕೇಳಿದಾಗ ನೀವು ಹೊಂದಿದ  ಭರವಸೆಯನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಪೌಲನಾದ ನಾನು ಇದೇ ಶುಭಸಂದೇಶದ ಪ್ರಚಾರಕ. ಈ ಶುಭಸಂದೇಶವನ್ನು ಜಗತ್ತಿನಲ್ಲಿರುವ ಸರ್ವ ಸೃಷ್ಟಿಗೂ ಸಾರಲಾಗುತ್ತಿದೆ.

ಕೀರ್ತನೆ: 54:3-4, 6, 8  
ಶ್ಲೋಕ: ನನಗಿದೋ ದೇವನೇ ಸಹಾಯಕನು

ನನಗಿದೋ ದೇವನೆ ಸಹಾಯಕನು I
ರಕ್ಷಿಸೆನ್ನನು ದೇವ, ನಿನ್ನ ನಾಮ ಶಕ್ತಿಯಿಂದ I
ನ್ಯಾಯ ದೊರಕಿಸೆನಗೆ ನಿನ್ನ ಪರಾಕ್ರಮದಿಂದ II
ನನ್ನ ಪ್ರಾರ್ಥನೆಯನು ಆಲಿಸಯ್ಯಾ I
ನನ್ನ ಮಾತುಗಳಿಗೆ ಕಿವಿಗೊಡು ದೇವಾ II ಶ್ಲೋಕ

ನನಗಿದೋ ದೇವನೆ ಸಹಾಯಕನು I
ಸರ್ವಾಪತ್ತುಗಳಿಂದ ತಪ್ಪಿಸಿದೆ ಪ್ರಭು, ನನ್ನನು I
ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ I
ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ ನಾಮಕೆ II

ಶುಭಸಂದೇಶ: ಲೂಕ 6:1-5

ಒಂದು ಸಬ್ಬತ್ ದಿನ ಯೇಸುಸ್ವಾಮಿ, ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾಂಭಿಸಿದರು.  ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, "ಸಬ್ಬತ್ ದಿನದಲ್ಲಿ ನಿಷಿದ್ದವಾದುದನ್ನು ನೀವು ಮಾಡುವುದೇಕೆ?" ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, "ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ," ಎಂದು ಉತ್ತರಕೊಟ್ಟರು.

05.09.2025 - " ಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ"

 ಮೊದಲನೆಯ ವಾಚನ: ಕೊಲೊಸ್ಸೆಯರಿಗೆ  ಬರೆದ  ಪತ್ರದಿಂದ  1:15-20


ಸಹೋದರರೇ,  ಅದೃಶ್ಯದೇವನ  ಸದೃಶ್ಯರೂಪನ  ಕ್ರಿಸ್ತ,  ಸೃಷ್ಟಿಗೆಲ್ಲ  ಜೇಷ್ಠಪುತ್ರನಾತ.   
ಇರಲಿ  ಇಹದಲಿ,  ಇರಲಿ  ಪರದಲಿ
ಅಶರೀರ  ಒಡೆಯರಾಗಲಿ,  ಒಡೆತನವಾಗಲಿ,  ಅಧಿಕಾರಿಗಳಾಗಲಿ,  ಆಧಿಪತ್ಯವಾಗಿರಲಿ  ಆದುದೆಲ್ಲವೂ  ಆತನಲಿ,  ಆತನಿಂದ,  ಆತನಿಗಾಗಿ. ಎಲ್ಲಕ್ಕೂ  ಮೊದಲೇ  ಇರುವನಾತ,  ಸಮಸ್ತಕ್ಕೂ  ಆಧಾರಭೂತ ಸಭೆಯೆಂಬ  ಶರೀರಕ್ಕೆ  ಶಿರಸ್ಸಾತ,  ಆದಿಸಂಭೂತ,  ಆಗಲೆಲ್ಲದರಲೂ  ಅಗ್ರಸ್ಥ  ಸತ್ತವರಿಂದ  ಮೊದಲೆದ್ದು  ಬಂದನಾತ. ಆ  ಸುತನಲ್ಲೇ  ಇರಿಸಲು  ನಿರ್ಧರಿಸಿದನು  ಪಿತದೇವ,  ತನ್ನ  ಸರ್ವಸಂಪೂರ್ಣತೆಯನು,  ಶಿಲುಬೆಯಿಂದಾತ  ಹರಿಸಿದ  ರಕುತದಿಂದ  ಆಗುತಲಿದೆ  ಶಾಂತಿಸಮಾಧಾನ
ನಡೆದಿದೆ  ದೇವರೊಡನೆ  ಸಂಧಾನ,  ಇಹಪರಗಳೆಲ್ಲಕೂ  ಆತನ  ಮುಖೇನ.

ಕೀರ್ತನೆ 100:2-5
ಶ್ಲೋಕ: ಹಾಡುತ,  ಪಾಡುತ,  ಬನ್ನಿ  ಪ್ರಭುವಿನ  ಸನ್ನಿಧಿಗೆ

ಅತಿ  ಸಂತೋಷದಿಂದ  ಸೇವೆಮಾಡಿ  ಆತನಿಗೆ |
ಹಾಡುತ,  ಪಾಡುತ,  ಬನ್ನಿ  ಆತನ  ಸನ್ನಿಧಿಗೆ||
ಪ್ರಭುವೇ  ದೇವರೆಂಬುದನು  ಮರೆತುಬಿಡಬೇಡಿ  ನೀವು|
ನಮ್ಮ  ಸೃಷ್ಟಿಕರ್ತ  ಆತನು,  ಆತನವರು  ನಾವು|
ಆತನ  ಜನ,  ಆತನೇ  ಮೇಯಿಸುವ  ಕುರಿಗಳು||

ಆತನ  ಗೃಹದ್ವಾರವನು  ಪ್ರವೇಶಿಸಿ  ಧನ್ಯವಾದಗಳೊಂದಿಗೆ|
ಆತನ  ಆವರಣದಲಿ  ನಿಲ್ಲಿರಿ  ಸ್ತುತಿಸ್ತೋತ್ರಗಳೊಂದಿಗೆ|
ಆತನ  ನಾಮವನು  ಕೊಂಡಾಡಿ  ಉಪಕಾರಸ್ಮರಣೆಯೊಂದಿಗೆ||

ಹೌದು,  ಪ್ರಭುವೆನಿತೋ  ಒಳ್ಳೆಯವನು|
ಇರುವುದಾತನ  ಪ್ರೀತಿ  ಯುಗಯುಗಕು|
ಆತನ  ಸತ್ಯತೆ  ತಲತಲಾಂತರಕು||

ಶುಭಸಂದೇಶ: ಲೂಕ 5:33-39



ಆ  ಕಾಲದಲ್ಲಿ  ಕೆಲವರು  ಯೇಸುವಿನ  ಬಳಿಗೆ  ಬಂದು,  " ಯೊವಾನ್ನನ  ಶಿಷ್ಯರು  ಪದೇ  ಪದೇ  ಉಪವಾಸವಿದ್ದು  ಪ್ರಾರ್ಥನೆ  ಮಾಡುತ್ತಾರೆ.  ಅದರಂತೆಯೇ,  ಫರಿಸಾಯರ  ಶಿಷ್ಯರೂ  ಮಾಡುತ್ತಾರೆ.  ನಿನ್ನ  ಶಿಷ್ಯರಾದರೋ  ತಿಂದು  ಕುಡಿಯುವುದರಲ್ಲಿಯೇ  ಇದ್ದಾರೆ, " ಎಂದು  ಅವರನ್ನು  ಮೂದಲಿಸಿದರು.  ಅದಕ್ಕೆ  ಯೇಸು,  " ಮದುವಣಿಗನು  ಜೊತೆಯಲ್ಲಿರುವಾಗ  ಮದುವೆಯ  ಅತಿಥಿಗಳನ್ನು  ಉಪವಾಸವಿರಿಸಲಾದೀತೆ ?   ಮದುವಣಿಗನು  ಅವರಿಂದ  ಅಗಲಬೇಕಾಗುವ  ಕಾಲವು  ಬರುವುದು.   ಆ  ದಿನಗಳು  ಬಂದಾಗ  ಅವರು  ಉಪವಾಸಮಾಡುವರು, " ಎಂದು  ಉತ್ತರ  ಕೊಟ್ಟರು.   ಮತ್ತೆ  ಅವರಿಗೆ  ಯೇಸು  ಈ  ಸಾಮತಿಯನ್ನು  ಹೇಳಿದರು:
" ಹಳೆಯ  ಅಂಗಿಗೆ  ತೇಪೆ  ಹಾಕಲು  ಹೊಸ  ಅಂಗಿಯಿಂದ  ತುಂಡನ್ನು  ಯಾರೂ  ಹರಿಯುವುದಿಲ್ಲ.   ಹಾಗೆ  ಮಾಡಿದ್ದೇ  ಆದರೆ  ಹೊಸದು  ಹರುಕಲಾಗಿ,  ಹಳೆಯದೂ  ಹೊಸ  ತೇಪೆಗೆ  ಹೊಂದಿಕೆಯಾಗದೆ  ಹೋಗುತ್ತದೆ.   ಅಂತೆಯೇ,  ಹಳೆಯ  ಬುದ್ದಲಿಗಳಲ್ಲಿ  ಹೊಸ  ಮದ್ಯವನ್ನು  ಯಾರೂ  ತುಂಬಿಡುವುದಿಲ್ಲ.   ತುಂಬಿಟ್ಟರೆ,  ಹೊಸ  ಮದ್ಯವು  ಬುದ್ದಲಿಗಳನ್ನು  ಬಿರಿಯುತ್ತದೆ,  ಮದ್ಯ  ಚೆಲ್ಲಿ  ಹೋಗುತ್ತದೆ,  ಬುದ್ದಲಿಗಳೂ  ಹಾಳಾಗುತ್ತವೆ.   ಆದುದರಿಂದ  ಹೊಸ  ಮದ್ಯವನ್ನು  ಹೊಸ  ಬುದ್ದಲಿಗಳಲ್ಲೇ  ತುಂಬಿಡಬೇಕು.   ಹಳೇ  ಮದ್ಯ  ಕುಡಿದವನಿಗೆ  ಹೊಸದು  ರುಚಿಸುವುದಿಲ್ಲ.   ಅವನು  ಹಳೆಯದೇ  ಶ್ರೇಷ್ಠವೆನ್ನುತ್ತಾನೆ, " ಎಂದರು.