30.05.2026 - "ಹಾಗಾದರೆ ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,

 ಮೊದಲನೇ ವಾಚನ: ಯೂದ 1:20-25



ಪ್ರಿಯರೇ,  ನೀವಾದರೋ  ಅತಿ  ಪರಿಶುದ್ಧ  ವಿವ್ವಾಸದ  ಆಧಾರದ  ಮೇಲೆ  ನಿರ್ಮಿಸಲಾದ  ಮಂದಿರದಂತೆ  ಪ್ರವರ್ಧಿಸಿರಿ;  ಪವಿತ್ರಾತ್ಮ  ಅವರಿಂದ  ಪ್ರೇರಿತರಾಗಿ  ಪ್ರಾರ್ಥಿಸಿರಿ.  ನಿತ್ಯ  ಜೀವವನ್ನು  ದಯಪಾಲಿಸುವ  ಕರುಣಾಮಯ  ಪ್ರಭು  ಯೇಸು  ಕ್ರಿಸ್ತರನ್ನು  ಎದುರು  ನೋಡುತ್ತಾ  ದೇವರ  ಪ್ರೀತಿಯಲ್ಲಿ  ನೆಲಗೊಂಡಿರಿ.  ಸಂಶಯಪಡುವವರಿಗೆ  ಸಹೃದಯದಿಂದ  ನೆರವಾಗಿರಿ.  ಬೆಂಕಿಯ  ಬಾಯಲ್ಲಿ  ಇರುವವರನ್ನು  ಎಳೆದು  ಸಂರಕ್ಷಿಸಿರಿ.  ಕೆಲವರಿಗೆ  ದಯೆತೋರಿಸುವಾಗ  ಭಯವಿರಲಿ.  ಪಾಪದ  ನಡತೆಯಿಂದ  ಹೊಲಸಾದ  ಅವರ  ಬಟ್ಟೆಬರೆಗಳನ್ನೂ  ಮುಟ್ಟದಿರಿ.  ಪಾಪದಲ್ಲಿ  ಎಡವಿ  ಬೀಳದಂತೆ  ನಿಮ್ಮನ್ನು  ಕಾಪಾಡುವ,  ತಮ್ಮ  ಮಹಿಮಾಸನ್ನಿಧಿಯಲ್ಲಿ  ನಿಮ್ಮನ್ನು  ನಿರ್ದೋಷಿಗಳನ್ನಾಗಿಯೂ  ಹರ್ಷಭರಿತರನ್ನಾಗಿಯೂ  ನಿಲ್ಲಿಸಲು  ಶಕ್ತರಾಗಿರುವ,  ನಮ್ಮ  ಉದ್ಧಾರಕರಾದ  ಏಕೈಕ  ದೇವರಿಗೆ  ನಮ್ಮ  ಪ್ರಭು  ಯೇಸು  ಕ್ರಿಸ್ತರ  ಮುಖಾಂತರ  ಮಹಿಮೆ,  ಮಹತ್ವ,  ಅಧಿಪತ್ಯ,  ಅಧಿಕಾರ  ಆಧಿಯಲ್ಲಿ  ಇದ್ದ  ಹಾಗೆ  ಈಗಲೂ  ಯಾವಾಗಲೂ  ಸಲ್ಲಲಿ!  ಆಮೆನ್.

ಕೀರ್ತನೆ
(63: 1, 2-3, 4-5, v. 1

ಶ್ಲೋಕ:  ದೇವಾ,  ನೀ  ಎನ್ನ  ದೇವ,  ನಿನಗಾಗಿ  ನಾ  ಕಾದಿರುವೆ|

1.  ದೇವಾ,  ನೀ  ಎನ್ನ  ದೇವ,  ನಿನಗಾಗಿ  ನಾ  ಕಾದಿರುವೆ|
ನಿರ್ಜಲ  ಮರುಭೂಮಿಯಲಿ  ನೀರಿಗಾಗಿ  ಹಾತೊರೆವಂತೆ||
ನಿನಗೋಸ್ಕರ  ಎನ್ನ  ತನು  ಸೊರಗಿದೆ,  ಮನ  ಬಾಯಾರಿದೆ|
ನಿನ್ನ  ಮಂದಿರದಲಿ  ನನಗಾದ   ದರ್ಶನದಲಿ||
ಶ್ಲೋಕ

2.  ನಿನ್ನ  ಶಕ್ತಿ  ಪ್ರತಿಭೆಯನ್ನು  ಕಂಡಿರುವೆನಲ್ಲಿ|
ಪ್ರಾಣಕ್ಕಿಂತ  ಮಿಗಿಲಾದುದು  ನಿನ್ನಚಲ  ಪ್ರೀತಿ||
ಎಡೆಬಿಡದೆ  ಮಾಳ್ವುದು  ನನ್ನೀ  ತುಟಿ  ನಿನ್ನ  ಸ್ತುತಿ|
ನಿನ್ನ  ಸ್ತುತಿಸುವೆ  ಜೀವಮಾನ  ಪರಿಯಂತ|
ಕೈ  ಮುಗಿವೆ  ನಿನ್ನ  ನಾಮದ   ಸ್ಮರಣಾರ್ಥ||
ಶ್ಲೋಕ

3.  ಮೃಷ್ಟಾನ್ನ  ತಿಂದಂತೆ  ಎನ್ನ  ಮನ  ಸಂತೃಪ್ತ|
ಸಂಭ್ರಮದಿಂದ  ನಿನ್ನ  ಹೊಗಳುವುದು  ಬಾಯ್ತುಂಬ||
ಶ್ಲೋಕ

🌻✝️🌻

ಘೋಷಣೆ
(ಕೀರ್ತನೆ 119: 27)

ಅಲ್ಲೆಲೂಯ, ಅಲ್ಲೆಲೂಯ!
ನಿನ್ನ  ನಿಯಮಗಳ  ಪಥವೆನಗೆ  ತಿಳಿಯಪಡಿಸಯ್ಯಾ | ನಿನ್ನ  ಅದ್ಭುತ  ಕಾರ್ಯಗಳನು  ನಾ  ಧ್ಯಾನಿಸುವೆನಯ್ಯಾ ||
ಅಲ್ಲೆಲೂಯ!

ಶುಭಸಂದೇಶ:ಮಾರ್ಕ 11:27-33

ಮಹಾ ದೇವಾಲಯದಲ್ಲಿ ಯೇಸು 

ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರು, ಧರ್ಮಶಾಸ್ತ್ರಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು, " ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಅಧಿಕಾರವನ್ನು ಕೊಟ್ಟವರು ಯಾರು?" ಎಂದಿ ಕೇಳಿದರು. ಅದಕ್ಕೆ ಯೇಸು, "ನಾನೂ ನಿಮಗೆ ಒಂದು ಪ್ರಶ್ನ ಹಾಕುತ್ತೇನೆ; ಅದಕ್ಕೆ ಉತ್ತರ ಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಸ್ನಾನದಿಕ್ಷೆ ಕೊಡುವ ಅಧಿಕಾರ ಯೊವಾನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ," ಎಂದರು. ಇದನ್ನು ಕೇಳಿದ ಅವರು ತಮ್ಮ ತಮ್ಮೊಳಗೇ ತರ್ಕ ಮಾಡುತ್ತಾ, "ದೇವರಿಂದ ಬಂದಿತೆಂದು ಹೇಳಿದರೆ, "ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?" ಎಂದು ಕೇಳುವನು. 'ಮನುಷ್ಯರಿಂದ ಬಂದಿತು" ಎಂದು ಹೇಳೋಣ ಎಂದರೆ ಅದೂ ಅಗದು, "ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. ಆದುದರಿಂದ ಅವರು, "ನಮಗೆ ಗೊತ್ತಿಲ್ಲ" ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು ,"ಹಾಗಾದರೆ ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ," ಎಂದರು.

No comments:

Post a Comment

06.06.2026 - ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು; ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು

  ಮೊದಲನೇ ವಾಚನ: 2 ತಿಮೊಥೇಯನಿಗೆ 4:1-8 ದೇವರ ಸಮಕ್ಷಮದಲ್ಲಿ, ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರ್ಪನ್ನು ಕೊಡಲು ಬರುವ ಕ್ರಿಸ್ತಯೇಸುವಿನ ಸಮಕ್ಷಮದಲ್ಲಿ, ನಾನ...