18.07.24 - "ನನ್ನ ನೊಗ ಹಗುರ, ನನ್ನ ಹೊರೆ ಸುಗಮ,”

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 26:7-9, 12, 16-19

ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ. ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು. ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು. ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ. ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ. ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ. ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ. ಬದುಕುವರು ನಿಧನರಾದ ನಮ್ಮ ಜನರು ಜೀವದಿಂದೇಳುವುವು ನಮ್ಮವರ ಶವಗಳು. ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು. ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ ಸತ್ತವರು ಪುನರುತ್ಥಾನಹೊಂದುವರು ನೆಲದಿಂದ.

ಕೀರ್ತನೆ: 102:13-14, 15, 16-18, 19-21
ಶ್ಲೋಕ: ದೃಷ್ಟಿಸಿದನು ಪ್ರಭು ತನ್ನ ಉನ್ನತ ಪವಿತ್ರ ಸ್ಥಾನದಿಂದ

ಶುಭಸಂದೇಶ: ಮತ್ತಾಯ 11:28-30


ಆ ಸಮಯದಲ್ಲಿ ಯೇಸುಸ್ವಾಮಿ ಜನಸಮೂಹವನ್ನುದ್ದೇಶಿಸಿ: "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ  ಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ,” ಎಂದರು.

No comments:

Post a Comment

06.06.2026 - ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು; ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು

  ಮೊದಲನೇ ವಾಚನ: 2 ತಿಮೊಥೇಯನಿಗೆ 4:1-8 ದೇವರ ಸಮಕ್ಷಮದಲ್ಲಿ, ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರ್ಪನ್ನು ಕೊಡಲು ಬರುವ ಕ್ರಿಸ್ತಯೇಸುವಿನ ಸಮಕ್ಷಮದಲ್ಲಿ, ನಾನ...