ಮೊದಲನೇ ವಾಚನ: ವಿಮೋಚನಕಾಂಡ 19:2-6
ಅವರು ರೆಫೀದೀಮನ್ನು ಬಿಟ್ಟು ಆ ಮರುಭೂಮಿಗೆ ಬಂದು ಅಲ್ಲಿನ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು. ಮೋಶೆ ಆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಬಂದನು. ಸರ್ವೇಶ್ವರಸ್ವಾಮಿ ಬೆಟ್ಟದ ಮೇಲಿಂದ ಕೂಗಿ ಅವನಿಗೆ, “ನೀನು ಯಕೋಬನ ಮನೆತನದವರಾದ ಇಸ್ರಯೇಲರಿಗೆ ಈ ಮಾತುಗಳನ್ನು ಹೇಳು: ‘ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದ್ದೀರಿ. ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತು ಈ ನನ್ನ ಸ್ಥಳಕ್ಕೆ ಸೇರಿಸಿದ್ದೇನೆ. ಇದೆಲ್ಲಾ ನಿಮಗೆ ಗೊತ್ತಿದೆ. ಹೀಗಿರಲು, ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ನೀಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ, ಸಮಸ್ತ ಭೂಮಿ ನನ್ನದಾಗಿದ್ದರೂ ನೀವು ಎಲ್ಲ ಜನಾಂಗಗಳಲ್ಲೂ ನನಗೆ ಸ್ವಕೀಯ ಜನರಾಗುವಿರಿ. ಅಲ್ಲದೆ ನೀವು ನನಗೆ ಯಾಜಕರಾಜವಂಶ ಹಾಗು ಪರಿಶುದ್ಧ ಜನಾಂಗ ಆಗುವಿರಿ.’ ಇಸ್ರಯೇಲರಿಗೆ ನೀನು ತಿಳಿಸಬೇಕಾದ ವಿಷಯವಿದು,” ಎಂದರು.
ಕೀರ್ತನೆ: 100: 1-2, 3, 5
ಶ್ಲೋಕ: ಸೃಷ್ಟಿಕರ್ತನ ಜನ, ಆತನೇ ಮೇಯಿಸುವ ಕುರಿಗಳು ನಾವು.
1. ಭೂನಿವಾಸಿಗಳೇ, ಜಯಘೋಷ ಮಾಡಿ ಪ್ರಭುವಿಗೆ|
ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ||
ಶ್ಲೋಕ
2. ಪ್ರಭುವೇ, ದೇವರೆಂಬುದನ್ನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು ಆತನವರು ನಾವು|
ಆತನ ಜನ ಆತನೇ ಮೇಯಿಸುವ ಕುರಿಗಳು ನಾವು||
ಶ್ಲೋಕ
3. ಹೌದು, ಪ್ರಭುವೆನಿತೋ ಒಳ್ಳೆಯವನು|
ಇರುವುದಾತನ ಪ್ರೀತಿ ಯುಗಯುಗಕು|
ಆತನ ಸತ್ಯತೆ ತಲತಲಾಂತರಕು||
ಎರಡನೇ ವಾಚನ: ರೋಮನರಿಗೆ 5: 6-11
ಶುಭಸಂದೇಶ: ಮತ್ತಾಯ 9: 35, 10:1-8
ಆ ಕಾಲದಲ್ಲಿ ಯೇಸು ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾ ಮಂದಿರಗಳಲ್ಲಿ ಬೋಧಿಸಿದರು. ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸುದರು. ಆ ಜನ ಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದರು ಹಾಗೂ ಬಳಲಿದ್ದರು ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು. ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕ ಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡು ಮಂದಿ ಪ್ರೇಷಿತರ ಹೆಸರುಗಳು ಇವು; ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ; ಫಿಲಿಪ್ಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಅಲ್ಫಾಯನ ಮಗ ಯಕೋಬ ಮತ್ತು ತದ್ದಾಯ; ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ. ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸು ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ."



No comments:
Post a Comment