23.03.22 - "ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು."

ಮೊದಲನೇ ವಾಚನ: ಧರ್ಮೋಪದೇಶಕಾಂಡ  4:1, 5-9

ಮೋಶೆ ಜನರಿಗೆ ಹೀಗೆಂದನು: ಇಸ್ರಯೇಲರೇ, ಕೇಳಿ: ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು. "ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ  ಸರ್ವೇಶ್ವರ ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು; ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, "ಈ ದೊಡ್ಡ ಜನಾಂಗ ಎಂಥಾ ಜ್ಞಾನವಿವೇಕವುಳ್ಳ  ಜನಾಂಗ', ಎಂದು ಮಾತಾಡಿಕೊಳ್ಳುವರು. ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ? ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆಯಾವ ಜನಾಂಗಕ್ಕೆ ಉಂಟು? "ಹೀಗಿರುವಲ್ಲಿ, ನೀವು ಬಹಳ ಜಾಗರೂಕತೆಯಿಂದಿರಿ; ನಿಮ್ಮ ಕಣ್ಣುಗಳಿಂದಲೇ ನೋಡಿದ ಘಟನೆಗಳನ್ನು ಎಷ್ಟು ಮಾತ್ರಕ್ಕೂ ಮರೆಯದಿರಿ; ಜೀವಮಾನಪರ್ಯಂತ ಇವುಗಳನ್ನು ನೆನಪಿನಲ್ಲಿಡಿ; ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಿ.

ಕೀರ್ತನೆ: 147: 12-13, 15-16, 19-20
ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು.

ಶುಭಸಂದೇಶ: ಮತ್ತಾಯ 5:17-19

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು. "ಮೊಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದು ಮಾಡಲು ಅಲ್ಲ ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು.

ಮನಸಿಗೊಂದಿಷ್ಟು : "ಹಿಂದಿನ ಹಾಗೂ ಇಂದಿನ ಸ್ಥಿತಿಗಳ ಬಗ್ಗೆ ಜಗಳವಾಡಿಕೊಂಡಿದ್ದರೆ, ಮುಂದಿನದನ್ನು ಕಳೆದುಕೊಳ್ಳುತ್ತೇವೆ" ಎನ್ನುತ್ತಾರೆ ವಿನ್ಸಟನ್ ಚರ್ಚಿಲ್. ಧರ್ಮಶಾಸ್ತ್ರದ ನಿಜ ಕಾಳಜಿ, ಆಶಯಗಳು ಮಾನವ ನಿರ್ಮಿತ ವಿಧಿ ಆಚರಣೆಗಳಲ್ಲಿ ಕಳೆದು ಹೋಗಬಾರದೆನ್ನುವ ಮಾತನ್ನು ಯೇಸು ಆಡುತ್ತಾರೆ. ದೇವರ ಬಗ್ಗೆಗಿನ ಅಖಂಡ ನಿಷ್ಠೆ ಹಾಗೂ ಪರರ ಬಗೆಗಿನ ಪ್ರೀತಿಗೆ ಧರ್ಮಶಾಸ್ತ್ರದ ತಪ್ಪು ಗ್ರಹಿಕೆಗಳು ಅಡ್ಡಬಾರದೆಂಬ ಆಶಯ ಯೇಸುವಿನದು.

ಪ್ರಶ್ನೆ : ಸ್ವರ್ಗ ಸಾಮ್ರಾಜ್ಯದಲ್ಲಿ ಮಹಾತ್ಮನೆನಿಸಿಕೊಳ್ಳುವಲ್ಲಿ ನಮ್ಮ ಪ್ರಯತ್ನವೆಷ್ಟು? 

No comments:

Post a Comment