ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.05.24

ಮೊದಲನೆಯ ವಾಚನ:  1 ಪೇತ್ರ 1:10-16

ಈ ಜೀವೋದ್ಧಾರವನ್ನು ಕುರಿತೇ ಪ್ರವಾದಿಗಳು ಸೂಕ್ಷ್ಮವಾಗಿ ವಿಚಾರಿಸಿ ಸಂಶೋಧನೆ ನಡೆಸಿದರು. ದೇವರು ನಿಮಗೆ ಕೊಡಲಿದ್ದ ಈ ವರವನ್ನು ಕುರಿತೇ ಅವರು ಪ್ರವಾದಿಸಿದರು. ಕ್ರಿಸ್ತಯೇಸು ಅನುಭವಿಸಬೇಕಾಗಿದ್ದ ಮರಣವನ್ನು, ಯಾತನೆಯನ್ನು ಮತ್ತು ಅನಂತರದ ಪುನರುತ್ಥಾನದ ಮಹಿಮೆಯನ್ನು ಈ ಪ್ರವಾದಿಗಳು ಪ್ರವಾದಿಸುವಾಗ, ತಮ್ಮಲ್ಲಿದ್ದ ಕ್ರಿಸ್ತಾತ್ಮವು ಇದಕ್ಕೆ ಯಾವ ಸಮಯ ಸಂದರ್ಭವನ್ನು ಸೂಚಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಈ ಸೇವಾಕಾರ್ಯವನ್ನು ಅವರು ಸ್ವಾರ್ಥಸಾಧನೆಗಾಗಿ ಅಲ್ಲ, ನಿಮಗೋಸ್ಕರವಾಗಿಯೇ ಮಾಡುತ್ತಿರುವುದಾಗಿ ಅವರಿಗೆ ತಿಳಿಸಲಾಗಿತ್ತು. ಅವರು ಪ್ರವಾದಿಸಿದ ಘಟನೆಗಳು ಈಗ ಸಂಭವಿಸಿವೆ ಎಂಬುದನ್ನು ಸ್ವರ್ಗದಿಂದ ಕಳುಹಿಸಲಾದ ಪವಿತ್ರಾತ್ಮರ ಶಕ್ತಿಯಿಂದ, ಶುಭಸಂದೇಶವನ್ನು ಸಾರಿದವರ ಮುಖಾಂತರ ನಿಮಗೆ ಪ್ರಕಟಿಸಲಾಗಿದೆ. ದೇವದೂತರು ಸಹ ವೀಕ್ಷಿಸಲು ಅಪೇಕ್ಷಿಸುವಂಥ ಸಂಗತಿಗಳಿವು. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿರಿ. ನಿಮ್ಮ ಮನಸ್ಸು ಕಾರ್ಯೋನ್ಮುಖವಾಗಿರಲಿ. ಯೇಸುಕ್ರಿಸ್ತರು ಪ್ರತ್ಯಕ್ಷರಾಗುವಾಗ ನಿಮಗೆ ಲಭಿಸಲಿರುವ ಸೌಭಾಗ್ಯದಲ್ಲಿ ಪೂರ್ಣ ನಿರೀಕ್ಷೆ ಉಳ್ಳವರಾಗಿರಿ. ವಿಧೇಯರಾದ ಮಕ್ಕಳಂತೆ ನಡೆದುಕೊಳ್ಳಿ. ನೀವು ಅಜ್ಞಾನಿಗಳಾಗಿದ್ದಾಗ ದುರಿಚ್ಛೆಗಳಿಗೆ ಈಡಾಗಿದ್ದಿರಿ; ಈಗ ಅವುಗಳಿಗೆ ಎಡೆಕೊಡಬೇಡಿ. ಅದಕ್ಕೆ ಬದಲು ನಿಮ್ಮನ್ನು ಕರೆದ ದೇವರು ಪವಿತ್ರರಾಗಿರುವಂತೆ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿರಿ. ಏಕೆಂದರೆ, “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಿ,” ಎಂದು ಲಿಖಿತವಾಗಿದೆ.

ಕೀರ್ತನೆ: 98:1, 2, 3, 4, 5-6. 
ಶ್ಲೋಕ:  ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು. 

ಶುಭಸಂದೇಶ: ಮಾರ್ಕ 10: 28-31

ಆಗ ಪೇತ್ರನು ಮುಂದೆ ಬಂದು, “ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು. ಆಗ ಯೇಸು, “ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ ಹಿಂಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೆ ಮುಂದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು. “ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು,” ಎಂದರು.

27.05.24

ಮೊದಲನೆಯ ವಾಚನ:  1 ಪೇತ್ರ 1:3-9

ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ! ಯೇಸುಕ್ರಿಸ್ತರನ್ನು ಮರಣದಿಂದ ಪುನರುತ್ಥಾನಗೊಳಿಸುವುದರ ಮೂಲಕ ದೇವರು ತಮ್ಮ ಅಪಾರ ಕರುಣೆಯಿಂದ ನಮಗೆ ಹೊಸ ಜನ್ಮವನ್ನು ಮತ್ತು ಜೀವಂತ ನಿರೀಕ್ಷೆಯನ್ನು ನೀಡಿದ್ದಾರೆ. ಹೀಗೆ ಅವರು, ತಮ್ಮ ಸ್ವಂತ ಜನರಿಗಾಗಿ ಸ್ವರ್ಗದಲ್ಲಿ ಕಾದಿರಿಸಿರುವ ಅಳಿಯದ, ಅಕ್ಷಯವಾದ, ಅನಂತವಾದ ಸಿರಿಸಂಪತ್ತಿಗೆ ನಿಮ್ಮನ್ನು ಬಾಧ್ಯರನ್ನಾಗಿ ಮಾಡಿದ್ದಾರೆ. ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗಲಿರುವ ಜೀವೋದ್ಧಾರವು ವಿಶ್ವಾಸಿಗಳಾದ ನಿಮಗೆ ಲಭಿಸುವಂತೆ ದೇವರು ತಮ್ಮ ಶಕ್ತಿಯಿಂದ ನಿಮ್ಮನ್ನು ಕಾಪಾಡುತ್ತಾರೆ. ಸದ್ಯಕ್ಕೆ ನೀವು ಕೊಂಚಕಾಲ ಹಲವಿಧವಾದ ಪರಿಶೋಧನೆಗಳ ನಿಮಿತ್ತ ದುಃಖವನ್ನು ಅನುಭವಿಸಬೇಕಾಗಿದ್ದರೂ ಪ್ರತ್ಯಕ್ಷವಾಗಲಿರುವ ಆ ಸಿರಿಸಂಪತ್ತನ್ನು ಜ್ಞಾಪಿಸಿಕೊಂಡು ಹರ್ಷಚಿತ್ತರಾಗಿರಿ. ಪರಿಶೋಧನೆಗಳು ಬಂದೊದಗುವುದು ನಿಮ್ಮ ವಿಶ್ವಾಸವನ್ನು ಪುಟವಿಡುವುದಕ್ಕಾಗಿಯೇ. ನಶಿಸಿ ಹೋಗುವ ಬಂಗಾರವೂ ಕೂಡ ಬೆಂಕಿಯಿಂದ ಪರಿಶೋಧಿತವಾಗುತ್ತದೆ. ಬಂಗಾರಕ್ಕಿಂತಲೂ ಬಹು ಅಮೂಲ್ಯವಾದ ನಿಮ್ಮ ವಿಶ್ವಾಸವು ಶೋಧಿತವಾಗಬೇಕು. ಆಗ ಮಾತ್ರ ಯೇಸುಕ್ರಿಸ್ತರು ಪ್ರತ್ಯಕ್ಷವಾಗುವ ದಿನದಂದು ನಿಮಗೆ ಪ್ರಶಂಸೆ, ಪ್ರತಿಷ್ಠೆ ಹಾಗೂ ಪ್ರತಿಭೆ ದೊರಕುತ್ತವೆ. ಕ್ರಿಸ್ತಯೇಸುವನ್ನು ನೀವು ನೋಡದಿದ್ದರೂ ಅವರನ್ನು ಪ್ರೀತಿಸುತ್ತೀರಿ. ನೀವೀಗ ಕಣ್ಣಾರೆ ಕಾಣದಿದ್ದರೂ ಅವರನ್ನು ವಿಶ್ವಾಸಿಸುತ್ತೀರಿ. ಇದರ ಅಂತಿಮ ಫಲವಾಗಿ ಜೀವೋದ್ಧಾರವನ್ನು ಪಡೆಯುತ್ತೀರಿ. ಈ ಕಾರಣದಿಂದ ಅವರ್ಣನೀಯವಾದ ಮಹದಾನಂದದಿಂದ ನಲಿಯುತ್ತೀರಿ.

ಕೀರ್ತನೆ 111:1-2, 4-5, 9, 10.
ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ  

ಶುಭಸಂದೇಶ: ಮಾರ್ಕ 10: 17-27

ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು ಅವರ ಬಳಿಗೆ ಓಡಿಬಂದು ಮೊಣಕಾಲೂರಿ, “ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿದನು. “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ: ನರಹತ್ಯೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸ ಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು,” ಎಂದು ಯೇಸು ಉತ್ತರವಿತ್ತರು. ಅದಕ್ಕೆ ಅವನು, “ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದು ಹೇಳಿದನು. ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, “ನೀನು ಮಾಡಬೇಕಾದ ಕಾರ್ಯವೊಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!” ಎಂದರು. ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯ ಸೂಜಿಗಣ್ಣಲ್ಲಿ ನುಸುಳುವುದು ಸುಲಭ,” ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಿಮಿತ ಆಶ್ಚರ್ಯವಾಯಿತು. “ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?” ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡಿ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗಲ್ಲ. ದೇವರಿಗೆ ಎಲ್ಲವೂ ಸಾಧ್ಯ,” ಎಂದರು.

26.05.24 - "ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ"

ಮೊದಲನೇ ವಾಚನ: ಧರ್ಮೋಪದೇಶಕಾಂಡ 4: 32-34, 39-40

“ದೇವರು ಮಾನವರನ್ನು ಸೃಷ್ಟಿಸಿ ಭೂಮಿಯ ಮೇಲಿರಿಸಿದ ದಿನ ಮೊದಲ್ಗೊಂಡು ಇಂದಿನವರೆಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೆ, ಅಂಥ ಅದ್ಭುತಕಾರ್ಯ ನಡೆದದ್ದುಂಟೇ? ಅಂಥ ಸುದ್ದಿಯನ್ನಾದರೂ ಕೇಳಿದ್ದುಂಟೇ? ನೀವೇ ವಿಚಾರಿಸಿಕೊಳ್ಳಿ. ದೇವರು ಅಗ್ನಿಜ್ವಾಲೆಯೊಳಗಿಂದ ಮಾತಾಡಿದ ಸ್ವರ ಕೇಳಿಸಿತಲ್ಲವೆ? ಬೇರೆ ಯಾವ ಜನರಾದರು ದೇವರ ಸ್ವರ ಕೇಳಿ ಬದುಕಿದ್ದುಂಟೇ? ಬೇರೆ ಯಾವ ದೇವರು ತಾನೆ ಪರಿಶೋಧನೆ, ಪವಾಡ, ಮಹತ್ಕಾರ್ಯ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಭಯಂಕರಕಾರ್ಯ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ? ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯಾದರೊ ಈಜಿಪ್ಟಿನಲ್ಲಿ ನಿಮ್ಮ ಪರವಾಗಿ, ಇದನ್ನೆಲ್ಲ ನಿಮ್ಮ ಕಣ್ಮುಂದೆಯೇ, ನಡೆಸಿದರಲ್ಲವೆ? ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು, ಬೇರೆಯಾದ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು. ನಾನು ಇಂದು ನಿಮಗೆ ತಿಳಿಸಿದ ಅವರ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಿರಿ. ಆಗ ನಿಮಗೂ ನಿಮ್ಮ ಸಂತತಿಗೂ ಶುಭವುಂಟಾಗುವುದು; ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶಾಶ್ವತವಾಗಿ ಕೊಡುವ ನಾಡಿನಲ್ಲಿ ನೀವು ದೀರ್ಘಕಾಲ ಬಾಳುವಿರಿ.”

ಕೀರ್ತನೆ: 33:4-6, 9, 18-20, 21-22
ಶ್ಲೋಕ: ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ. 

ಸತ್ಯವಾದುದು ಆತನ ಪವಿತ್ರ ವಾಕ್ಯ, 
ಸ್ತುತ್ಯವಾದುದು ಆತನ ಪುನೀತ ಕಾರ್ಯ
ಸತ್ಯಸಂಧನು, ನ್ಯಾಯಪ್ರಿಯನು ಆತನು
ಅಚಲ ಪ್ರೀತಿಯಿಂದ ಜಗವನು ತುಂಬಿಹನು//  ಶ್ಲೋಕ

ಸೃಷ್ಟಿಯಾಯಿತು ಗಗನಮಂಡಲ ಆತನ ನುಡಿಯೊಂದಕೆ 
ರೂಪುಗೊಂಡಿತು ತಾರಾಮಂಡಲ ಅವನುಸಿರು ಮಾತ್ರಕೆ
ಸೃಷ್ಟಿಯಾಯಿತು ಆತನ ನುಡಿ ಮಾತ್ರಕೆ
ಸ್ಥಾಪನೆಯಾಯಿತು ಅವನ ಆಣತಿಯೊಂದಕೆ//  ಶ್ಲೋಕ

ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆವವರನು 
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು 
ತಪ್ಪಿಸುವನವರ ಪ್ರಾಣವನು ಮರಣದಿಂದ 
ಉಳಿಸುವನು ಜೀವವನು ಕ್ಷಾಮಡಾಮರದಿಂದ//  ಶ್ಲೋಕ

ನೆಮ್ಮದಿಯಿಂದಿದೆ ಎನ್ನ ಮನ ಆತನಲಿ, 
ನಂಬಿರುವೆವು ಅತನ ಶ್ರೀ ನಾಮದಲಿ
 ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ
 ಕಾದಿಹೆವು ಇದೋ ನಿನ್ನ ನಂಬಿ ಭರವಸಡಿ//  ಶ್ಲೋಕ

ಎರಡನೇ ವಾಚನ: ರೋಮನರಿಗೆ 8: 14-17

ಯಾರು ಯಾರು ದೇವರ ಆತ್ಮನಿಗೆ ಮಣಿದು ನಡೆಯುತ್ತಾರೋ ಅವರು ದೇವರ ಮಕ್ಕಳು. ದೇವರು ನಿಮಗೆ ದಯಪಾಲಿಸಿರುವ ಆತ್ಮ ನಿಮ್ಮನ್ನು ಮತ್ತೊಮ್ಮೆ ಗುಲಾಮರನ್ನಾಗಿಯೂ ಭಯಭೀತರನ್ನಾಗಿಯೂ ಮಾಡುವುದಿಲ್ಲ. ಬದಲಿಗೆ, ನಿಮ್ಮನ್ನು ದೇವರ ಮಕ್ಕಳನ್ನಾಗಿಸುತ್ತದೆ. ಆ ಆತ್ಮದ ಮೂಲಕವೇ ನಾವು ದೇವರನ್ನು, “ಅಪ್ಪಾ, ತಂದೆಯೇ” ಎಂದು ಕರೆಯುತ್ತೇವೆ. ನಾವು ದೇವರ ಮಕ್ಕಳೆಂಬುದಕ್ಕೆ ದೇವರ ಆತ್ಮ ನಮ್ಮ ಅಂತರಾತ್ಮದೊಂದಿಗೆ ಸಾಕ್ಷಿ ನುಡಿಯುತ್ತಾರೆ. ನಾವು ಮಕ್ಕಳಾಗಿದ್ದರೆ, ಹಕ್ಕುಬಾಧ್ಯತೆ ಉಳ್ಳವರು. ಹೌದು, ದೇವರ ಸೌಭಾಗ್ಯಕ್ಕೆ ಬಾಧ್ಯಸ್ಥರು; ಕ್ರಿಸ್ತಯೇಸುವಿನೊಡನೆ ಸಹಬಾಧ್ಯಸ್ಥರು. ಕ್ರಿಸ್ತಯೇಸುವಿನ ಯಾತನೆಯಲ್ಲೂ ನಾವು ಪಾಲುಗಾರರಾಗಬೇಕು. ಆಗ ಅವರ ಮಹಿಮೆಯಲ್ಲೂ ಪಾಲುಗಾರರಾಗುತ್ತೇವೆ.

ಶುಭಸಂದೇಶ: ಮತ್ತಾಯ 28: 16-20


ಹನ್ನೊಂದು ಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು. ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು. ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು.

25.05.24

ಮೊದಲನೆಯ ವಾಚನ: ಯಕೋಬ 5:13-20

ನಿಮ್ಮಲ್ಲಿ ಯಾರಾದರೂ ಸಂಕಟದಲ್ಲಿದ್ದರೆ ಅಂಥವನು ದೇವರಲ್ಲಿ ಪ್ರಾರ್ಥಿಸಲಿ. ಸಂತೋಷದಲ್ಲಿದ್ದರೆ ದೇವರಿಗೆ ಸ್ತುತಿಗಾನ ಹಾಡಲಿ. ನಿಮ್ಮಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ, ಅವನು ಸಭಾಪಾಲಕರನ್ನು ಕರೆಸಲಿ. ಅವರು ಅವನಿಗಾಗಿ ದೇವರನ್ನು ಪ್ರಾರ್ಥಿಸಿ ಪ್ರಭುವಿನ ಹೆಸರಿನಲ್ಲಿ ಅವನನ್ನು ಅಭ್ಯಂಗಿಸಲಿ. ಆಗ ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ. ಹಾಸಿಗೆ ಹಿಡಿದ ರೋಗಿಯನ್ನು ಪ್ರಭು ಎಬ್ಬಿಸುತ್ತಾರೆ; ಅವನು ಪಾಪಮಾಡಿದವನಾಗಿದ್ದರೆ ಕ್ಷಮೆಯನ್ನು ಪಡೆಯುತ್ತಾನೆ. ಆದ್ದರಿಂದ ಒಬ್ಬರಿಗೊಬ್ಬರು ಪಾಪಗಳನ್ನು ಒಪ್ಪಿಸಿಕೊಳ್ಳಿರಿ. ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ಆಗ ನೀವು ಸ್ವಸ್ಥರಾಗುತ್ತೀರಿ. ಸತ್ಪುರುಷನ ಪ್ರಾರ್ಥನೆ ಶಕ್ತಿಯುತವಾದುದು ಹಾಗೂ ಫಲದಾಯಕವಾದುದು. ಎಲೀಯನು ನಮ್ಮಂಥ ಸಾಧಾರಣ ಮನುಷ್ಯ. ಆದರೂ ಅವನು ಮಳೆಬಾರದಿರಲೆಂದು ಭಕ್ತಿಯಿಂದ ಪ್ರಾರ್ಥಿಸಿದ್ದರಿಂದ ಮೂರು ವರ್ಷ ಆರು ತಿಂಗಳವರೆಗೂ ಮಳೆ ಬೀಳಲಿಲ್ಲ. ಅನಂತರ, ಅವನು ಮತ್ತೆ ಮಳೆಗಾಗಿ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿಯಿತು. ಭೂಮಿ ಫಲಿಸಿತು. ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯದ ಮಾರ್ಗವನ್ನು ಬಿಟ್ಟು ತಪ್ಪಿಹೋದಾಗ ಇನ್ನೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ, ಇದನ್ನು ನೆನಪಿಗೆ ತಂದುಕೊಳ್ಳಿರಿ : ಪಾಪಿಯನ್ನು ದುರ್ಮಾರ್ಗದಿಂದ ಮರಳಿ ಸನ್ಮಾರ್ಗಕ್ಕೆ ತಂದವನು ತನ್ನ ಆತ್ಮವನ್ನು ನಿತ್ಯ ಮರಣದಿಂದ ತಪ್ಪಿಸಿ ತನ್ನ ಲೆಕ್ಕವಿಲ್ಲದ ಪಾಪಗಳಿಗೆ ಕ್ಷಮೆಯನ್ನು ಪಡೆಯುತ್ತಾನೆ.

ಕೀರ್ತನೆ 141:1-2, 3, 8
ಶ್ಲೋಕ: ಸಮರ್ಪಕವಾಗಲಿ ನನ್ನ ಪ್ರಾರ್ಥನೆ ಧೂಪಾರತಿಯಂತೆ.

ಬೇಗನೆ ಬಾ ಪ್ರಭೂ, ಮೊರೆಯಿಡುವೆ ನಿನಗೆ|
ಮೊರೆಯಿಡುವಾಗಲೆಲ್ಲ ಕಿವಿಗೊಡು ನನಗೆ||
ಸಮರ್ಪಕವಾಗಲಿ ನನ್ನ ಪ್ರಾರ್ಥನೆ ಧೂಪಾರತಿಯಂತೆ|
ಕೈಮುಗಿದು ಮಾಡುವ ವಂದನೆ ಸಂಧ್ಯಾಬಲಿಯರ್ಪಣೆಯಂತೆ||

ಕಾವಲಿರಿಸು ಪ್ರಭೂ, ನನ್ನ ಬಾಯಿಗೆ|
ಪಹರೆಯಿರಲಿ ನನ್ನ ತುಟಿಕದಗಳಿಗೆ||
ಹೇ ಪ್ರಭುದೇವಾ, ದೇವಾ, ನನ್ನ ದೃಷ್ಟಿ ನಿನ್ನ ಮೇಲಿದೆ|
ವಿನಾಶಕೊಪ್ಪಿಸಬೇಡೆನ್ನ, ನಿನ್ನಾಶ್ರಯ ಕೋರಿರುವೆ||

ಶುಭಸಂದೇಶ: ಮಾರ್ಕ 10:13-16

ಆ ಕಾಲದಲ್ಲಿ ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುವಿನ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಕದರಿಸಿದರು. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, " ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ ; ದೇವರ ಸಾಮ್ರಾಜ್ಯ ಇಂಥವರದೇ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ, " ಎಂದರು. ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನಿರಿಸಿ ಹರಸಿದರು.

24.05.24 - ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ

ಮೊದಲನೆಯ ವಾಚನ: ಯಾಕೋಬ 5: 9-12


ಸಹೋದರರೇ, ದಂಡನಾತೀರ್ಪಿಗೆ ಗುರಿ ಆಗದಂತೆ ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿ. ಇಗೋ, ನ್ಯಾಯಾಧೀಶನು ಬಾಗಿಲ ಬಳಿಯಲ್ಲೇ ನಿಂತಿದ್ದಾನೆ. ಸಹೋದರರೇ, ಸಂಕಷ್ಟಗಳನ್ನು ತಾಳ್ಮೆಯಿಂದ ಸಹಿಸಿದ್ದಕ್ಕೆ ನಿದರ್ಶನ ಬೇಕೇ? ಪ್ರಭುವಿನ ಹೆಸರಿನಲ್ಲಿ ಬೋಧಿಸಿದ ಪ್ರವಾದಿಗಳನ್ನು ಸ್ಮರಿಸಿಕೊಳ್ಳಿ. ತಾಳಿದವನು ಬಾಳಿಯಾನು ಎಂದು ಹೇಳುತ್ತೇವಲ್ಲವೇ? ಯೋಬನ ತಾಳ್ಮೆಯನ್ನು ಕುರಿತು ನೀವು ಕೇಳಿದ್ದೀರಿ. ಅಂತ್ಯದಲ್ಲಿ ಆತನಿಗೆ ಸರ್ವೇಶ್ವರ ದಯಪಾಲಿಸಿದ್ದನ್ನು ಬಲ್ಲಿರಿ. ದೇವರ ದಯೆ ಅನಂತ, ಅವರ ಅನುಕಂಪ ಅಪಾರ. ಮುಖ್ಯವಾಗಿ ಸಹೋದರರೇ, ಆಣೆಯಿಡಬೇಡಿ. ಪರಲೋಕದ ಮೇಲಾಗಲಿ, ಭೂಲೋಕದ ಮೇಲಾಗಲಿ, ಇನ್ನಾವುದರ ಮೇಲಾಗಲಿ ನೀವು ಆಣೆಯಿಡಬಾರದು. ಹೌದಾದರೆ ಹೌದು, ಇಲ್ಲವಾದರೆ ಇಲ್ಲ ಎನ್ನಿ. ಆಗ ನೀವು ದಂಡನಾತೀರ್ಪಿಗೆ ಗುರಿಯಾಗುವುದಿಲ್ಲ.

ಕೀರ್ತನೆ 103: 1-2, 3-4, 8-10, 12-13
ಶ್ಲೋಕ: ಪ್ರಭು, ದಯಾಳು, ಕೃಪಾಪೂರ್ಣನು. 

ಶುಭಸಂದೇಶ: ಮಾರ್ಕ: 10: 1-2

ಅಲ್ಲಿಂದ ಯೇಸುಸ್ವಾಮಿ ಜೋರ್ಡನ್ ನದಿಯ ಆಚೆಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. ಅಲ್ಲಿಯೂ ಜನರು ಗುಂಪು ಗುಂಪಾಗಿ ಅವರ ಬಳಿಗೆ ಬಂದರು. ಯೇಸು ಅವರಿಗೂ ಉಪದೇಶ ಮಾಡಿದರು. ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ?” ಎಂದು ಕೇಳಿದರು. ಯೇಸು, “ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ?” ಎಂದು ಅವರನ್ನೇ ಪುನಃ ಪ್ರಶ್ನಿಸಿದರು. ಅದಕ್ಕೆ ಅವರು, “ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದಾನೆ,” ಎಂದರು. ಆಗ ಯೇಸು, “ನಿಮ್ಮ ಹೃದಯ ಕಲ್ಲಾಗಿ ಇದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. ಆದರೆ ಸೃಷ್ಟಿಯ ಆರಂಭದಿಂದಲೇ ‘ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ. ಈ ಕಾರಣದಿಂದ ಗಂಡನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎನ್ನುತ್ತದೆ ಪವಿತ್ರಗ್ರಂಥ. ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ. ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ,” ಎಂದರು. ಅಂದು, ಮನೆಗೆ ಹೋದ ಬಳಿಕ ಶಿಷ್ಯರು, ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. ಅದಕ್ಕೆ ಅವರು, “ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಯಾಗುತ್ತಾನೆ. ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ,” ಎಂದರು.

23.05.24

ಮೊದಲನೆಯ ವಾಚನ: ಯಾಕೋಬ 5: 1-6

ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ. ನಿಮ್ಮ ಐಶ್ವರ್ಯ ನಾಶವಾಗಿದೆ. ನಿಮ್ಮ ಬೆಲೆಬಾಳುವ ಬಟ್ಟೆಗಳಿಗೆ ನುಸಿಹತ್ತಿದೆ. ನಿಮ್ಮ ಬೆಳ್ಳಿಬಂಗಾರಕ್ಕೆ ತುಕ್ಕು ಹಿಡಿದಿದೆ. ಆ ತುಕ್ಕೇ ನಿಮಗೆ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ಬೆಂಕಿಯಂತೆ ದಹಿಸಿಬಿಡುತ್ತದೆ. ಅಂತ್ಯಕಾಲಕ್ಕಾಗಿ ನೀವು ಬೆಂಕಿಯನ್ನೇ ಶೇಖರಿಸಿಟ್ಟುಕೊಂಡಿದ್ದೀರಿ. ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ. ಲೋಕದಲ್ಲಿ ನೀವು ಸುಖಭೋಗಿಗಳಾಗಿ ವಿಲಾಸ ಜೀವನ ನಡೆಸಿದ್ದೀರಿ. ವಧೆಯ ದಿನಕ್ಕಾಗಿ ಪಶುಗಳಂತೆ ನಿಮ್ಮನ್ನೇ ಕೊಬ್ಬಿಸಿಕೊಂಡಿದ್ದೀರಿ. ನಿಮ್ಮನ್ನು ವಿರೋಧಿಸಿದ ಸಜ್ಜನನನ್ನು ಖಂಡಿಸಿ ಕೊಲೆಮಾಡಿಸಿದ್ದೀರಿ.

ಕೀರ್ತನೆ 49: 14-19 ಮತ್ತಾಯ 5: 3
ಶ್ಲೋಕ: ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು, ಸ್ವರ್ಗಸಾಮ್ರಾಜ್ಯ ಅವರದು. 

ಶುಭಸಂದೇಶ: ಮಾರ್ಕ: 41-50


ನೀವು ಕ್ರಿಸ್ತಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು. ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ನನ್ನಲ್ಲಿ ವಿಶ್ವಾಸ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು; ಎರಡು ಕೈಗಳಿದ್ದು ನರಕದ ಆರದ ಬೆಂಕಿಗೆ ಗುರಿಯಾಗುವುದಕ್ಕಿಂತ ಅಂಗಹೀನನಾಗಿ ಅಮರಜೀವವನ್ನು ಪಡೆಯುವುದೇ ಲೇಸು. ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು, ಎರಡು ಕಾಲುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಕುಂಟನಾಗಿ ಅಮರಜೀವವನ್ನು ಪಡೆಯುವುದೇ ಲೇಸು. ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು. ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು. ಊಟಕ್ಕೆ ಉಪ್ಪಿನಂತೆ ಪ್ರತಿಯೊಬ್ಬನಿಗೆ ಅಗ್ನಿಪರೀಕ್ಷೆ ಅವಶ್ಯಕ. ಒಪ್ಪಿಗೆಯಾಗಿ ಸಮಾಧಾನದಿಂದಿರಿ,” ಎಂದರು. ಉಪ್ಪೇನೋ ಪ್ರಯೋಜನಕರ. ಆದರೆ ಉಪ್ಪೇ ಸಪ್ಪೆಯಾದರೆ, ಇನ್ನು ಯಾವುದರಿಂದ ಅದನ್ನು ಪುನಃ ರುಚಿಗೊಳಿಸಲಾದೀತು? ನೀವು ಉಪ್ಪಿನಂತೆ ಒಬ್ಬರಿಗೊಬ್ಬರು ಒಪ್ಪಿಗೆಯಾಗಿ ಸಮಾಧಾನದಿಂದಿರಿ,” ಎಂದರು.


22.05.24 - "ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನ"

ಮೊದಲನೆಯ ವಾಚನ: ಯಾಕೋಬ 4:13-17


ಸಹೋದರರೇ, ಇಂಥಿಂಥ ದಿನ ಇಂಥಿಂಥ ಪಟ್ಟಣಕ್ಕೆ ಹೋಗೋಣ. ಅಲ್ಲಿ ಒಂದು ವರ್ಷ ಇದ್ದು ವ್ಯಾಪಾರ ಮಾಡೋಣ; ಅತಿಯಾಗಿ ಲಾಭ ಸಂಪಾದಿಸೋಣ, ಎಂದೆಲ್ಲಾ ಆಲೋಚಿಸುವವರೇ, ಈಗ ಕೇಳಿ: ನೀವು ಇಷ್ಟೆಲ್ಲಾ ಆಲೋಚಿಸಿದರೂ ನಾಳೆ ಏನಾಗುವುದೋ ನಿಮಗೇ ತಿಳಿಯದು. ನಿಮ್ಮ ಜೀವಮಾನ ಎಷ್ಟು ಮಾತ್ರದ್ದು? ಈಗ ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹೊಗೆಯಂತೆ ಅದು. ಆದ್ದರಿಂದ ನೀವು ಅಂಥ ಮಾತನ್ನು ಬಿಟ್ಟು, ಪ್ರಭುವಿನ ಚಿತ್ತವಿದ್ದರೆ ನಾವು ಬದುಕಿರುತ್ತೇವೆ, ಇಂಥಿಂಥದ್ದನ್ನು ಮಾಡುತ್ತೇವೆ, ಎಂದು ನೀವು ಹೇಳುವುದೇ ಸರಿ. ಆದರೆ ನೀವು ಅಹಂಭಾವದಿಂದ ಕೊಚ್ಚಿಕೊಳ್ಳುತ್ತೀರಿ. ಹಾಗೆ ಕೊಚ್ಚಿಕೊಳ್ಳುವುದು ಸರಿಯಲ್ಲ. ಒಬ್ಬನು ಒಳ್ಳೆಯದನ್ನು ಮಾಡಬೇಕೆಂದು ತಿಳಿದಿದ್ದೂ ಅದನ್ನು ಮಾಡದಿದ್ದರೆ ಅದು ಅವನಿಗೆ ಪಾಪವಾಗಿರುತ್ತದೆ.

ಕೀರ್ತನೆ 49:2,5-6,7-9,10 ಮತ್ತಾಯ 5: 3
ಶ್ಲೋಕ: ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು.

ಜನಸಾಮಾನ್ಯರೇ, ಜನಾಧಿಪತಿಗಳೇ,
ದರಿದ್ರರೇ, ಧನವಂತರೇ,|
ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು ಆಲಿಸಿರಿ||

ಆಪತ್ಕಾಲದಲ್ಲಿ ನಾನೇಕೆ ಭಯಪಡಬೇಕು?|
ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು?||
ಅವರ ಭರವಸೆ ಸಿರಿಸಂಪತ್ತಿನಲ್ಲಿ|
ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ||

ತನ್ನ ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ|
ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ|
ಪ್ರಾಣಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ||
ಸಮಾಧಿಗೆಳೆಯದೆ ಸದಾ ಬಾಳುವ ಬಯಕೆ|
ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ||

ಬುದ್ಧಿಜೀವಿಗಳು ಸಾಯುವುದು ಖಂಡಿತ|
ಮೂರ್ಖ ಮಂದಗತಿಗಳ ಅಳಿವೂ ನಿಶ್ಚಿತ|
ಅವರ ಸೊತ್ತು ಪರರ ಪಾಲು, ಇದೂ ಖಚಿತ||

ಶುಭಸಂದೇಶ: ಮಾರ್ಕ 9:38-40


ಆ ಕಾಲದಲ್ಲಿ ಯೊವಾನ್ನನು ಯೇಸುವಿಗೆ, ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ. ಆದಕಾರಣ ಅವನನ್ನು ತಡೆದೆವು, ಎಂದನು. ಅದಕ್ಕೆ ಯೇಸು, ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ. ನೀವು ಕ್ರಿಸ್ತ ಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಎಂದರು.